ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಪ್ರೀತಿಯ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ನಮಸ್ಕಾರ ಎಲ್ಲರಿಗೂ. ಪ್ರತಿ ವರ್ಷ ಬೇರೆ ಜಾಗಗಳಿಂದ ಬೇರೆ ಊರಿನಿಂದ ನನ್ನ ಹುಟ್ಟಿದ ಹಬ್ಬ ಆಚರಣೆ ಮಾಡಲು ಭೇಟಿ ಮಾಡಲು ಬರುತ್ತಿದ್ದೀರಿ. ಕಳೆದ ಎರಡು ವರ್ಷಗಳಿಂದ ಇದು ಸಾಧ್ಯವಾಗಲಿಲ್ಲ. ಕೊರೊನಾ ಎಲ್ಲೆಡೆ ಇರುವುದರಿಂದ ನಮ್ಮ ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತುಂಬಾ ಕಾಡುತ್ತಿದೆ. ಈ ಬಾರಿ ಯಾವುದೇ ಆಚರಣೆ ಮನೆಯ ಬಳಿ ಇರುವುದಿಲ್ಲ. ದಯವಿಟ್ಟು ಯಾರೂ ಬೇಜರಾಗಬೇಡಿ. ಆದರೂ ನಿಮ್ಮ ಸೋಷಿಯಲ್ ಮೀಡಿಯಾ ಮಸೇಜ್ ನೋಡುತ್ತೇನೆ. ಸಾಧ್ಯವಾದಷ್ಟು ರಿಪ್ಲೈ ಕೊಡುತ್ತೇನೆ ಮತ್ತು ಎಲ್ಲ ಪ್ರೀತಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇಂತಿ ನಿಮ್ಮ ರಾಧಿಕಾ ಪಂಡಿತ್.
ಪ್ರತಿ ವರ್ಷ ರಾಧಿಕಾ ಪಂಡಿತ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಅಭಿಮಾನಿಗಳು ತಂದ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದರು.
ಈ ಹಿಂದೆ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಬ್ಲಿಕ್ ಜೊತೆ ಮಾತನಾಡಿದ್ದ ರಾಧಿಕಾ ಪಂಡಿತ್, ನನಗೆ ಬರ್ತ್‍ಡೇ ಆಚರಣೆ ಅಂದ್ರೆ ತುಂಬಾ ಇಷ್ಟ. ಯಾಕಂದ್ರೆ ಆ ದಿನ ನಮಗೆ ಜಾಸ್ತಿ ಪ್ರಾಮುಖ್ಯತೆ ಇರುತ್ತೆ. ಮಾತ್ರವಲ್ಲದೇ ಕೇಕ್ ಕಟ್ ಮಾಡೋದು, ಬಲೂನ್ಸ್, ಹ್ಯಾಪಿ ಬರ್ತ್ ಡೇ ಅಂತಾ ಹಾಡು ಹೇಳೊದು ಅಂದ್ರೆ ನನಗೆ ಮೊದಲಿಂದಲೂ ತುಂಬಾ ಇಷ್ಟ ಅಂತಾ ತನ್ನ ಖುಷಿ ಹಂಚಿಕೊಂಡಿದ್ದರು.
ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ರಾಧಿಕಾ, ಯಶ್ ಈ ಹಿಂದೆ ಶುಭಾಶಯ ಹೇಳಲು ಬಂದ ಅಭಿಮಾನಿಗಳಿಗೆ ಕನಕಾಂಬರ ಹೂವಿನ ಸಸಿ ನೀಡಿದ್ದರು. ಯಶ್ ದಂಪತಿ ಸಸಿ ಗಿಫ್ಟ್ ನೀಡುವುದು ಹೊಸದೆನಲ್ಲ. ಈ ಹಿಂದೆ ಅತಿಥಿಗಳಿಗೆ ಸಂಪಿಗೆ ಸಸಿ ನೀಡಿ ಮದುವೆಯ ಆಹ್ವಾನ ಪತ್ರಿಕೆಯನ್ನು ಯಶ್ ನೀಡಿದ್ದರು.