ಒಂದೇ ದಿನ 644 ಉಗ್ರರ ಶರಣಾಗತಿ

Public TV
1 Min Read
Assam 644 extremists

– ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಾಪಸ್
– ಶರಣಾದ ವ್ಯಕ್ತಿಗಳಿಗೆ ಪುನರ್ವಸತಿ ಕ್ರಮ

ಗುವಾಹಟಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಸ್ಸಾಂನಲ್ಲಿ ನಿಷೇಧಕ್ಕೆ ಒಳಗಾದ ಉಗ್ರ ಸಂಘಟನೆಗಳ ಒಟ್ಟು 644 ಸದಸ್ಯರು ಸರ್ಕಾರಕ್ಕೆ ಶರಣಾಗಿ, ಸಮಾಜದ ಮುಖ್ಯ ವಾಹಿನಿಗೆ ಬರುವ ನಿರ್ಧಾರ ಕೈಗೊಂಡಿದ್ದಾರೆ.

ದೇಶದಲ್ಲೆ ಅಶಾಂತಿ ಸೃಷ್ಟಿಗೆ ಭಯೋತ್ಪಾದಕರು ತೀವ್ರ ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಉಗ್ರರು ಶರಣಾಗಿರುವುದು ವಿಶೇಷ. ಇಷ್ಟು ಪ್ರಮಾಣದ ಉಗ್ರರು ಉಗ್ರವಾದವನ್ನು ತ್ಯಜಿಸಿ ಒಂದೇ ದಿನದಲ್ಲಿ ಶರಣಾಗುವುದು ಇದೆ ಮೊದಲು ಎಂದು ವರದಿಯಾಗಿದೆ.

Assam 644 extremists 1

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸಮ್ಮುಖದಲ್ಲಿ ನಿಷೇಧಿತ ಎನ್‍ಡಿಎಫ್‍ಡಿ, ಯುಎಲ್‍ಎಫ್‍ಎ, ಕೆಎಲ್‍ಒ, ಸಿಪಿಐ(ನಕ್ಸಲ್), ಎನ್‍ಎಸ್‍ಎಲ್‍ಎ, ಎಡಿಎಫ್ ಹಾಗೂ ಎನ್‍ಎಲ್‍ಎಫ್‍ಬಿ ಬಂಡುಕೋರ ಸಂಘಟನೆಗಳ 644 ಸದಸ್ಯರು ತಮ್ಮ ಸಂಘಟನೆಗಳನ್ನು ತೊರೆದು ಶರಣಾದರು.

ಈ ಸಂದರ್ಭದಲ್ಲಿ ಉಗ್ರರು 177 ಶಸ್ತ್ರಾಸ್ತ್ರಗಳು, 58 ಸಿಡಿಮದ್ದುಗಳು, 1.93 ಕೆಜಿ ತೂಕದ ಸ್ಫೋಟಕಗಳು, 52 ಗ್ರೆನೇಡ್‍ಗಳು, 71 ಬಾಂಬ್‍ಗಳು, 3 ರಾಕೆಟ್ ಲಾಂಚರ್ ಗಳು 306 ಸ್ಫೋಟಕ ಸಾಧನಗಳು ಹಾಗೂ 15 ಚೂಪಾದ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ.

Assam 644 extremists 3

ಮುಖ್ಯಮಂತ್ರಿ ಸೋನೊವಾಲ್ ಈ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣಾದ ವ್ಯಕ್ತಿಗಳಿಗೆ ಸರ್ಕಾರದಲ್ಲಿರುವ ಯೋಜನೆಗಳಡಿ ಪುನರ್ವಸತಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಅಸ್ಸಾಂ ಅಭಿವೃದ್ಧಿಗಾಗಿ ಸಮಾಜದ ಮುಖ್ಯವಾಹಿನಿಗೆ ವಾಪಸ್ಸಾದ ನಿಮ್ಮ ಬಗ್ಗೆ ಜನ ಹೆಮ್ಮೆ ಪಡುತ್ತಾರೆ. ಇದೇ ರೀತಿಯಾಗಿ ಮತ್ತಷ್ಟು ವ್ಯಕ್ತಿಗಳು ಶರಣಾಗಿ ಭಾರತದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *