ಬೆಂಗಳೂರು: ಕಡುಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ್ದ ಮಹತ್ವದ ಇಂದಿರಾ ಕ್ಯಾಂಟೀನ್ ನಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಳ್ಳ ಬಿಲ್ ಲೆಕ್ಕ ನೀಡಿ ಅಪಾರ ಪ್ರಮಾಣದ ಹಣ ಲೂಟಿ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ಹೌದು, ಜನವರಿ 25 ರಂದು ಕಳಾಸ ಬಂಡೂರಿ ಹೋರಾಟಕ್ಕೆ ಬೆಂಬಲಿಸಿ ಬೆಂಗಳೂರು ಬಂದ್ ಮಾಡಲಾಗಿತ್ತು. ಅಂದು ಯಾವುದೇ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸಿರಲಿಲ್ಲ. ಆದರೆ ಅಂದು ಸಹ ಕ್ಯಾಂಟಿನ್ ನಡೆದಿದ್ದಾಗಿ ಬಿಲ್ ಸಲ್ಲಿಸಲಾಗಿದೆ.
Advertisement
ಸದ್ಯ ಕ್ಯಾಂಟಿನ್ ನಿರ್ವಹಣೆ ಕುರಿತು ಬಿಬಿಎಂಪಿ ನೀಡಿರುವ ಪಟ್ಟಿಯಲ್ಲಿ ಕಳಾಸ ಬಂಡೂರಿ ಹೋರಾಟದ ಬಂದ್ ದಿನವೂ 172 ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸಿದೆ. ಅಲ್ಲದೇ 1,97,575 ಮಂದಿ ಊಟ ಮಾಡಿದ್ದಾಗಿ ಮಾಹಿತಿ ನೀಡಿದೆ. ಇದರಿಂದ ಒಟ್ಟಾರೆ 63,22,400 ರೂ. ಸುಳ್ಳು ಲೆಕ್ಕದ ಬಿಲ್ ಮಾಡಿರುವ ವಿಚಾರ ದಾಖಲೆ ಸಮೇತ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಗುತ್ತಿಗೆ ಪಡೆದ ಸಂಸ್ಥೆ ಕಳುಹಿಸಿದ ಬಿಲ್ ಅನ್ನು ಪರಿಶೀಲಿಸದೇ ಬಿಬಿಎಂಪಿ ಹಣವನ್ನು ಪಾವತಿ ಮಾಡಿದೆ. ಕ್ಯಾಂಟಿನ್ ನಡೆಯದೇ ಇದ್ದರೂ ಬಿಲ್ ಪಾವತಿ ಹೇಗಾಯ್ತು ಎನ್ನುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.