ಜೈಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಒಯ್ಯುತ್ತಿದ್ದ ನೂರಾರು ಕೆ.ಜಿ ಬೆಳ್ಳಿ ಆಭರಣಗಳನ್ನು ರಾಜಸ್ಥಾನದ ರಾಜಾಸ್ ಮಂಡ್ ಹಾಗೂ ಶಿರೋಹಿ ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಚುನಾವಣೆ ನಿಮಿತ್ತ ಯಾವುದೇ ಅಕ್ರಮಗಳು ನಡೆಯಬಾರದೆಂದು ಪೊಲೀಸರು ವಾಹನಗಳ ತಪಾಸಣೆಯನ್ನು ಕೈಗೊಳ್ಳಲು ಹಲವೆಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದ್ದಾರೆ. ಬುಧವಾರದಂದು ರಾಜಸ್ಥಾನದ ರಾಜಾಸ್ ಮಂಡ್ ಹಾಗೂ ಶಿರೋಹಿ ಜಿಲ್ಲೆಯಲ್ಲಿ ಆರು ಮಂದಿಯನ್ನು ಬಂಧಿಸಿ, ಅವರಿಂದ ಬರೋಬ್ಬರಿ 616 ಕೆಜಿ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement
Advertisement
ನಾಥದ್ವಾರ ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಕಾರೊಂದನ್ನು ತಡೆದು ತಪಾಸಣೆ ನಡೆಸಿದ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ 600 ಕೆಜಿ ಬೆಳ್ಳಿ ಆಭರಣಗಳು ಪತ್ತೆಯಾಗಿದೆ. ಈ ಕಾರಿನಲ್ಲಿದ್ದ ಐವರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಶಿರೋಹಿಯಲ್ಲಿ ಬಸ್ಸಿನಲ್ಲಿ 16 ಕೆಜಿ ಬೆಳ್ಳಿ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ, ಆತನ ಬಳಿ ಇದ್ದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
Advertisement
ಸದ್ಯ ವಶಪಡಿಸಿಕೊಂಡಿರುವ ಬೆಳ್ಳಿ ಆಭರಣವನ್ನು ಪೊಲೀಸರು ಐಟಿ ಇಲಾಖೆಗೆ ನೀಡಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ತಿಳಿಸಿದ್ದಾರೆ.