– ಪ್ರತಾಪ್ಗೌಡ ಪಾಟೀಲ್ ವಿರುದ್ದ ರೈತರ ಆಕ್ರೋಶ
– ಮೊದಲು ಭರವಸೆ ಕೊಟ್ಟು ಈಗ ಅವೈಜ್ಞಾನಿಕ ಅಂತಿರೋ ಸರ್ಕಾರ
ರಾಯಚೂರು: ಜಿಲ್ಲೆಯ ಮಸ್ಕಿಯ ನಾರಾಯಣಪುರ ಬಲದಂಡೆ 5 ಎ ಕಾಲುವೆ ಹೋರಾಟ 60 ದಿನಗಳನ್ನ ಪೂರೈಸಿದರು ಸರ್ಕಾರ ರೈತರಿಗೆ ಸ್ಪಂದಿಸಿಲ್ಲ. ಬದಲಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ರೈತರ ಮಧ್ಯೆ ಜಗಳ ತಂದಿಡುವ ಕೆಲಸ ಮಾಡಿದ್ದಾರೆ ಅಂತ ರೈತರು ಕಿಡಿಕಾರಿದ್ದಾರೆ. ಹೋರಾಟದ ದಿಕ್ಕನ್ನ ಬದಲಿಸುವ ಪ್ರಯತ್ನ ನಡೆದಿದೆ ಅಂತ ರೈತರು ರೊಚ್ಚಿಗೆದ್ದಿದ್ದಾರೆ.
Advertisement
ನಾಲ್ಕು ಗ್ರಾಮ ಪಂಚಾಯತಿಗಳ ಬಹಿಷ್ಕಾರ, ಮಸ್ಕಿ ಬಂದ್, ಸತತ 60 ದಿನಗಳಿಂದ ಅನಿರ್ಧಿಷ್ಟಾವದಿ ಧರಣಿ ನಡೆಸಿದರು 5 ಎ ಕಾಲುವೆ ಹೋರಾಟಕ್ಕೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ರಾಯಚೂರಿನ ಮಸ್ಕಿಯ ಪಾಮನಕಲ್ಲೂರಿನಲ್ಲಿ ರೈತರು ಕಾಲುವೆಗಾಗಿ ನಿರಂತರ ಹೋರಾಟವನ್ನ ನಡೆಸಿದ್ದಾರೆ. ಆದ್ರೆ ಪ್ರತಾಪ್ ಗೌಡ ಪಾಟೀಲ್ ತಮ್ಮ ಬೆಂಬಲಿಗರನ್ನೇ 5 ಎ ಕಾಲುವೆ ಹೋರಾಟ ನಿರತ ರೈತರು ಅಂತ ಬೆಂಗಳೂರಿಗೆ ಕರೆದೊಯ್ದು ಸರ್ಕಾರಕ್ಕೆ ಹರಿ ನೀರಾವರಿ ಬಗ್ಗೆ ಮನವಿ ಮಾಡಿದ್ದಾರೆ. ನೀರಾವರಿ ಸಚಿವರೊಂದಿಗೆ ಮಾತನಾಡಿದವರು ಯಾರೂ 5 ಎ ರೈತರಲ್ಲ ಬದಲಾಗಿ ಪ್ರತಾಪ್ ಗೌಡ ಪಾಟೀಲ್ ಬೆಂಬಲಿಗರು. ರೈತರ ಮಧ್ಯೆ ತಂದಿಡುವ ಕೆಲಸವನ್ನ ಮಾಡಲಾಗುತ್ತಿದೆ ಅಂತ ರೈತರು ಆರೋಪಿಸಿದ್ದಾರೆ.
Advertisement
Advertisement
5 ಎ ಕಾಲುವೆ ಅವೈಜ್ಞಾನಿಕವಾಗಿರುವುದರಿಂದ ನಂದವಾಡಗಿಯಿಂದ 23 ಗ್ರಾಮಗಳಿಗೆ ಅನುಕೂಲವಾಗುವಂತೆ ತೆರೆದ ಕಾಲುವೆ ಮುಖಾಂತರ ಹನಿ ನೀರಾವರಿ ಬದಲು ಹರಿ ನೀರಾವರಿ ಯೋಜನೆ ಜಾರಿ ಮಾಡಲಾಗುವುದು ಅಂತ ಸರ್ಕಾರ ಈಗ ಹೇಳುತ್ತಿದೆ. ಇದು ಸರಿಯಾದ ಕ್ರಮವಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಸಾವಿರಾರು ಹೆಕ್ಟೇರ್ ಫಲವತ್ತಾದ ಭೂಮಿ ಇದ್ರೂ ನೀರಿನ ಅಲಭ್ಯತೆಯಿಂದ ರೈತರು ಗುಳೆ ಹೋಗುತ್ತಿದ್ದಾರೆ. ಹೀಗಾಗಿ 12 ವರ್ಷಗಳಿಂದ 5ಎ ಕಾಲುವೆಗಾಗಿ ಹೋರಾಟ ನಡೆದಿದೆ. ಹಲವಾರು ತಾಂತ್ರಿಕ ಕಾರಣಗಳ ನೆಪವೊಡ್ಡಿ ಮಸ್ಕಿ, ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲೂಕಿನ 107 ಗ್ರಾಮಗಳನ್ನ ನೀರಿನಿಂದ ವಂಚಿತರನ್ನಾಗಿ ಮಾಡಲಾಗಿದೆ. ಮಸ್ಕಿಯ ಕಾಳಾಪುರದಿಂದ ಶುರುವಾಗಬೇಕಿದ್ದ 5 ಎ ಕಾಲುವೆ ಕಾಮಗಾರಿ ಈವರೆಗೂ ಪ್ರಾರಂಭ ಮಾಡಿಯೇ ಇಲ್ಲ. ಕೂಡಲೇ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸಬೇಕು ಅಂತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಒತ್ತಾಯಿಸಿದ್ದಾರೆ.
ಒಟ್ನಲ್ಲಿ, ರೈತರ ಹೋರಾಟಕ್ಕೆ ಸ್ಪಂದಿಸಿ ಅನುಕೂಲ ಮಾಡಿಕೊಡಬೇಕಾದ ಸರ್ಕಾರ ಅನ್ನದಾತರಿಗೆ ಒಳಿತು ಮಾಡುವ ಬದಲು ಸಮಯವ್ಯರ್ಥ ಮಾಡುತ್ತ ಚೆಲ್ಲಾಟವಾಡುತ್ತಿದೆ. ಈ ಮೊದಲು ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಲುವೆ ನಿರ್ಮಾಣ ಬಗ್ಗೆ ಭರವಸೆ ನೀಡಿದ ಜನಪ್ರತಿನಿಧಿಗಳೇ ಈಗ ವರಸೆ ಬದಲಿಸಿದ್ದಾರೆ. ಹೀಗಾಗಿ ರೈತರು 5 ಎ ಕಾಲುವೆ ಜಾರಿಯಾಗುವವರೆಗೂ ಹೋರಾಟ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದಾರೆ.