ನೇಪಿಟಾವ್: ಮ್ಯಾನ್ಮಾರ್‌ನಲ್ಲಿ (Myanmar Earthquake) ಸಂಭವಿಸಿದ ಪ್ರಬಲ ಭೂಕಂಪಕ್ಕೆ 60 ಮಂದಿ ಸಾವನ್ನಪ್ಪಿದ್ದು, 250 ಮಂದಿ ಗಾಯಗೊಂಡಿದ್ದಾರೆ.
ಮ್ಯಾನ್ಮಾರ್‌ನಲ್ಲಿ ಸತತ ಎರಡು ಭೂಕಂಪಗಳು ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7 ಮತ್ತು 6.4 ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಶುಕ್ರವಾರ ತಿಳಿಸಿದೆ. ಭೂಕಂಪದ ಕೇಂದ್ರಬಿಂದುವು ಮಧ್ಯ ಮ್ಯಾನ್ಮಾರ್‌ನಲ್ಲಿದ್ದು, ಮೋನಿವಾ ನಗರದಿಂದ ಸುಮಾರು 50 ಕಿಲೋಮೀಟರ್ ಪೂರ್ವಕ್ಕೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: Photo Gallary: ಮ್ಯಾನ್ಮಾರ್, ಥೈಲ್ಯಾಂಡ್‌ನಲ್ಲಿ ಡೆಡ್ಲಿ ಭೂಕಂಪ – ಭೀಕರ ದೃಶ್ಯಗಳನ್ನು ಫೋಟೊಗಳಲ್ಲಿ ನೋಡಿ..
ಥೈಲ್ಯಾಂಡ್‌ನಲ್ಲಿಯೂ ನಾಲ್ಕು ಸಾವುಗಳು ವರದಿಯಾಗಿವೆ. 81 ಜನರು ಕಾಣೆಯಾಗಿದ್ದಾರೆ. 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮ್ಯಾನ್ಮಾರ್‌ನ ಮಂಡಲೇಯಲ್ಲಿರುವ ಐಕಾನಿಕ್ ಅವಾ ಸೇತುವೆ ಭೂಕಂಪದಲ್ಲಿ ಕುಸಿದು ಬಿದ್ದು, ಒಂದು ಮಸೀದಿ ಭಾಗಶಃ ಕುಸಿದು ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ. ಹಲವಾರು ಕಟ್ಟಡಗಳು ಕುಸಿದು ರಸ್ತೆಗಳು ಬಿರುಕು ಬಿಟ್ಟಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ – 40ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆ, ಗಗನಚುಂಬಿ ಕಟ್ಟಡಗಳು ನೆಲಸಮ!
ಥೈಲ್ಯಾಂಡ್‌ನ ಹಲವಾರು ಭಾಗಗಳಲ್ಲಿಯೂ ಭೂಕಂಪದ ಅನುಭವವಾಯಿತು. ಭೂಕಂಪದ ನಂತರ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಗಗನಚುಂಬಿ ಕಟ್ಟಡ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಹತ್ತಾರು ಮಂದಿ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಭೂಕಂಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಹೇಳಿದ್ದಾರೆ. ಭಾರತೀಯ ಅಧಿಕಾರಿಗಳು ಸನ್ನದ್ಧರಾಗಿರುವಂತೆ ಸೂಚನೆ ನೀಡಿದ್ದಾರೆ.