ಬೆಂಗಳೂರು: ಇಷ್ಟು ದಿನ 60 ವರ್ಷ ಮೇಲ್ಪಟ್ಟವರನ್ನು ಮಾತ್ರ ಮಹಾಮಾರಿ ಕೊರೊನಾ ಕಾಡುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಯುವಕರನ್ನು ಕೂಡ ವೈರಸ್ ಬಲಿ ತೆಗೆದುಕೊಳ್ಳುತ್ತಿದೆ ಎಂಬುದು ಬಯಲಾಗಿದೆ.
ಹೌದು. ರಾಜ್ಯದಲ್ಲಿ ಯುವಕರ ಸಾಲು ಸಾಲು ಸಾವು ಆತಂಕಕ್ಕೀಡು ಮಾಡಿದೆ. ರಾಜ್ಯದಲ್ಲಿ ಜೂನ್ ತಿಂಗಳಲ್ಲೇ ಮೂವರು ಯುವಜನರು ಕೊರೊನಾಗೆ ಬಲಿಯಾಗಿದ್ದಾರೆ.
ಕಲಬುರಗಿಯಲ್ಲಿ 17 ವರ್ಷದ ಯುವತಿ ಕೊರೊನಾಗೆ ಬಲಿಯಾಗಿದ್ದಾಳೆ. ಈಕೆಗೆ ನರರೋಗವಿತ್ತು. ಹೀಗಾಗಿ ಮಾರ್ಚ್ 13ರಂದು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಅಂದರೆ ಜೂನ್ 1ರಂದು ಯುವತಿಯಲ್ಲಿ ಜ್ವರ ಹಾಗೂ ತಲೆನೋವು ಕಾಣಿಸಿಕೊಳ್ಳುತ್ತೆ. ಈ ಹಿನ್ನೆಲೆಯಲ್ಲಿ ಆಕೆ ಕಲಬುರಗಿಯ ಖಾಸಗಿ ಕ್ಲಿನಿಕ್‍ನಲ್ಲಿ ಚಿಕಿತ್ಸೆಗೆ ತೆರಳಿದ್ದಾಳೆ. ಇದೇ ಸಂದರ್ಭದಲ್ಲಿ ಆಕೆಗೆ ಡೆಂಗ್ಯೂ ಇರುವುದು ದೃಢವಾಗಿದೆ.
ಜೂನ್ 2ರಂದು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಜೂನ್ 4ರಂದು ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಾಳೆ. ಯುವತಿಯ ಸಾವಿನ ನಂತರ ಜೂನ್ 9 ರಂದು ವರದಿ ಬಂದಿದ್ದು, ಆಕೆಗೆ ಕೊರೊನಾ ವೈರಸ್ ತಗಲಿರುವುದು ದೃಢಪಟ್ಟಿತ್ತು.
ಇತ್ತ ರಾಯಚೂರಲ್ಲಿ ಕೂಡ 28 ವರ್ಷದ ಯುವತಿ ಕೊರೊನಾಗೆ ಬಲಿಯಾಗಿದ್ದಾಳೆ. ಮೇ 25ರಂದು ಯುವತಿ ಬೀದರ್‍ನಿಂದ ರಾಯಚೂರಿಗೆ ಬಂದಿದ್ದಳು. ಮೇ 30ರಂದು ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಟಿಬಿ ಹಾಗೂ ಮನೋಕಾಯಿಲೆಯಿಂದ ಬಳಲುತ್ತಿದ್ದ ಈಕೆಗೆ ಕೊರೊನಾ ಪರೀಕ್ಷೆ ನಂತರ ಸೋಂಕು ದೃಢವಾಗಿತ್ತು. ಐಸೋಲೇಷನ್ ವಾರ್ಡಿನಲ್ಲಿದ್ದ ಯುವತಿ ಜೂನ್ 11ಕ್ಕೆ ಮೃತಪಟ್ಟಿದ್ದಾಳೆ.
ಬೆಂಗಳೂರಲ್ಲಿ 23 ವರ್ಷದ ಯುವಕ ಜೂನ್ 12ರಂದು ಸಾವನ್ನಪ್ಪಿದ್ದಾನೆ. ಜೆಸಿ ನಗರದ ಯುವಕನಿಗೆ ಜೂ.10ರಂದು ಕೊರೊನಾ ಇರುವುದು ದೃಢವಾಗಿತ್ತು. ಬಳಿಕ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಶುಕ್ರವಾರ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ.