ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta National Park) 6 ವರ್ಷದ ಹಿಮಾ ಎಂಬ ಹುಲಿ (Tiger) ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮಾ ಜೂನ್ 2024 ರಲ್ಲಿ ಮೊದಲ ಬಾರಿಗೆ ಮರಿಗಳಿಗೆ ಜನ್ಮ ನೀಡಿತ್ತು. ಈಗ ಮತ್ತೆ ಮರಿಗಳಿಗೆ ಜನ್ಮ ನೀಡಿದೆ.
8 ವರ್ಷದ ಆರುಣ್ಯ ಎಂಬ ಹುಲಿ ಮೊದಲ ಬಾರಿಗೆ ಎರಡು ಮರಿಗಳಿಗೆ ಜನ್ಮ ನೀಡಿದೆ. ಈ ಹೆಣ್ಣು ಹುಲಿಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ತಮಿಳುನಾಡಿನ ಚೆನ್ನೈನ ಅರಿಗ್ನಾರ್ ಅನ್ನಾ ಜೂಲಾಜಿಕಲ್ ಪಾರ್ಕ್‌ನಿಂದ ತಂದಿರುವ ಬಿಳಿ ಹುಲಿ ವೀರ್‌ಗೆ ಜೊತೆ ಮಾಡಲಾಗಿತ್ತು. ತಾಯಿ ಮತ್ತು ಮರಿಗಳು ಎರಡೂ ಆರೋಗ್ಯವಾಗಿವೆ.
ಸಫಾರಿಯಲ್ಲಿರುವ ತಾಯಿ ಆರುಣ್ಯ ಜೊತೆ ಎರಡು ಮರಿಗಳು ಆರೋಗ್ಯವಾಗಿದ್ದು ತಾಯಿ ಮರಿಗಳಿಗೆ ಹಾಲುಣಿಸುತ್ತಿದೆ. ಹಿಮಾ ನಾಲ್ಕು ಮರಿಗಳಿಗೆ ಜನ್ಮ ನೀಡಿದ ಕೆಲವು ಹೊತ್ತು ಮಾತ್ರ ಮರಿಗಳ ಜೊತೆಗೆ ಇತ್ತು. ಅದಾದ ಬಳಿಕ ಮರಿಗಳಿಗೆ ಹಾಲುಣಿಸದೆ ದೂರವಾಗಿತ್ತು.
ಹಿಮಾ ಜನ್ಮ ನೀಡಿದ ಮರಿಗಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೆ ಮರಿಗಳಿಗೆ ಆಡಿನ ಹಾಲನ್ನು ನೀಡಲಾಗುತ್ತಿದೆ. ಮರಿಗಳ ಆರೈಕೆಗಾಗಿ ಸಿಬ್ಬಂದಿ ನೇಮಕ ಮಾಡಲಾಗಿದೆ. ವೈದ್ಯರು ಮರಿಗಳನ್ನು ನೋಡಿಕೊಳ್ಳುತ್ತಿದ್ದು, ನಾಲ್ಕು ಮರಿಗಳನ್ನು ಪ್ರತ್ಯೇಕವಾಗಿಟ್ಟು ಆರೈಕೆ ಮಾಡುತ್ತಿದ್ದಾರೆ.