Wednesday, 18th July 2018

ಈ ಆರು ಕಾರಣಗಳಿಗಾಗಿ ನೀವು ಪದ್ಮಾವತಿ ಸಿನಿಮಾವನ್ನು ನೋಡ್ಲೇಬೇಕು!

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಪದ್ಮಾವತಿ’ ಸಿನಿಮಾದ ಮೇನಿಯಾ ದೇಶಾದ್ಯಂತ ಶುರುವಾಗಿದೆ. ಸಿನಿಮಾದ ಮೂರು ಫಸ್ಟ್ ಲುಕ್ ಮತ್ತು ಟ್ರೇಲರ್ ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪದ್ಮಾವತಿಯ ಟ್ರೆಂಡ್ ಆರಂಭವಾಗಿದೆ.

ಸಿನಿಮಾದ ಟ್ರೇಲರ್ ಮಧ್ಯಾಹ್ನ 13.03 ಗಂಟೆಗೆ ಬಿಡುಗಡೆ ಮಾಡುವ ಮೂಲಕ ತಾವು ಬೇರೆಯವರಿಗಿಂತ ಭಿನ್ನ ಎಂಬುದನ್ನು ಸಂಜಯ್ ಲೀಲಾ ಬನ್ಸಾಲಿ ತೋರಿಸಿದ್ದಾರೆ. ಬನ್ಸಾಲಿ ಪ್ರತಿಬಾರಿಯೂ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾವನ್ನು ತೆರೆಯ ಮೇಲೆ ತಮ್ಮದೇ ಶೈಲಿಯಲ್ಲಿ ತರುತ್ತಾರೆ.

1. ಬನ್ಸಾಲಿಯ ಕಥೆ ಹೇಳುವ ಶೈಲಿ:
ಯಾವುದೇ ಒಂದು ಕಥೆಯನ್ನು ನೋಡುಗರಿಗೆ ತಲುಪಿಸುವ ಸಾಮರ್ಥ್ಯವನ್ನು ಬನ್ಸಾಲಿ ಹೊಂದಿದ್ದಾರೆ. ಬನ್ಸಾಲಿ ಅವರು ಹಿಂದೆ ನಿರ್ದೇಶನ ಮಾಡಿದ್ದ ಹಮ್ ದಿಲ್ ದೇ ಚುಕೇ ಸನಮ್, ದೇವ್‍ದಾಸ್, ರಾಮ್‍ಲೀಲಾ ಮತ್ತು ಬಾಜೀರಾವ್ ಮಸ್ತಾನಿ ಸಿನಿಮಾಗಳು ಅವರ ಚಾಕಚಕ್ಯತೆಗೆ ಉದಾಹರಣೆಯಾಗಿವೆ. ಹೀಗಾಗಿ `ಪದ್ಮಾವತಿ’ ಸಿನಿಮಾ ಹೇಗೆ ಮೂಡಿ ಬಂದಿದೆ ಎಂಬ ಕುತೂಹಲ ಉಂಟಾಗಿದೆ.

2. ಚಾಲೆಂಜಿಂಗ್ ಪಾತ್ರದಲ್ಲಿ ಕಲಾವಿದರು:
ಇದೊಂದು ವಿಭಿನ್ನ ಮತ್ತು ಐತಿಹಾಸಿಕ ಕಥೆಯನ್ನು ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ನಟಿಸಿರುವ ಎಲ್ಲ ಕಲಾವಿದರಿಗೂ ಇದೊಂದು ಚಾಲೆಂಜಿಂಗ್ ಸಿನಿಮಾವಾಗಿದೆ. ದೀಪಿಕಾ, ರಣ್‍ವೀರ್ ಸಿಂಗ್ ಮತ್ತು ಶಾಹಿದ್ ಇದೂವರೆಗೂ ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಹಿಂದೆ ದೀಪಿಕಾ ಮತ್ತು ರಣ್‍ವೀರ್ ಇಬ್ಬರೂ `ಬಾಜೀರಾವ್ ಮಸ್ತಾನಿ’ ಸಿನಿಮಾ ರಾಜಾ ಮತ್ತು ರಾಣಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಆದರೆ ಪದ್ಮಾವತಿ ಕಥೆ ಸಂಪೂರ್ಣ ಭಿನ್ನವಾಗಿದ್ದು ಕಲಾವಿದರ ಕೆರಿಯರ್ ಬದಲಾಯಿಸುವ ಸಾಧ್ಯತೆಗಳಿವೆ.

3. ಚಿತ್ರಕಥೆ ಮತ್ತು ಯುದ್ಧ:
ಭಾರತೀಯ ಸಿನಿಮಾದಲ್ಲಿ ಇದೂವರೆಗೂ ಯುದ್ಧ ಸನ್ನಿವೇಶಗಳನ್ನು ಹೊಂದಿರುವ ಚಿತ್ರಗಳು ಸಾಕಷ್ಟು ತೆರೆಕಂಡಿವೆ. ರಾಜಸ್ಥಾನ ರಾಜರ ಯುದ್ಧದ ವಿಧಾನ ತಂತ್ರಗಳು ಮತ್ತು ಅಲ್ಲಾವುದ್ದೀನ್ ಖಿಲ್ಜಿ ಯುದ್ಧದ ಪ್ರತಿತಂತ್ರಗಳನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ. ಕಲಾವಿದರೆಲ್ಲರೂ ತಮಗೆ ನೀಡಿರುವ ಪಾತ್ರಗಳಿಗೆ ಜೀವ ತುಂಬಿರುವುದನ್ನು ಟ್ರೇಲರ್ ನಲ್ಲಿ ನೋಡಬಹುದಾಗಿದೆ.

4. ಸಂಗೀತ:
ಬನ್ಸಾಲಿ ತಮ್ಮ ಸಿನಿಮಾದಲ್ಲಿ ಹಿತವಾದ ಸಂಗೀತಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಟ್ರೇಲರ್ ನಲ್ಲಿ ಇಂಪಾದ ಹಿನ್ನೆಲೆ ಸಂಗೀತವಿದ್ದು, ಇನ್ನೂ ಹಾಡುಗಳು ಹೇಗೆ ಮೂಡಿ ಬರಲಿವೆ ಎಂಬ ಕಾತುರ ಸಂಗೀತಾಭಿಮಾನಿಗಳಲ್ಲಿ ಹುಟ್ಟು ಹಾಕಿದೆ.

5. ಭಾರತೀಯ ಸಂಸ್ಕೃತಿ ಮತ್ತು ವೈಭವ:
ನಿದೇಶಕ ಬನ್ಸಾಲಿ ಕಳೆದ ರಾಜಾಡಳಿತವನ್ನು ತೆರೆಯ ಮೇಲೆ ತರಲು ನಿಸ್ಸೀಮರು. 1303ರಲ್ಲಿ ಅಲ್ಲಾವುದ್ದೀನ್ ಖಲ್ಜಿ ಭಾರತದ ಮೇಲೆ ದಂಡೆತ್ತಿ ಬಂದಿದ್ದು, ಅಂದಿನ ಭಾರತದ ಕಲ್ಪನೆ ಸಿನಿಮಾದಲ್ಲಿ ಮೂಡಿಬರಲಿದೆ. ಭಾರತೀಯ ಸಂಸ್ಕೃತಿ, ಕಲೆ, ವಾಸ್ತು ಶಿಲ್ಪ, ರಾಜಾಡಳಿತ ಮತ್ತು ವಸ್ತ್ರ ವಿನ್ಯಾಸವನ್ನು ಸಿನಿಮಾ ಒಳಗೊಂಡಿದೆ.

6. ಗ್ರಾಫಿಕ್ಸ್:
ಕಲಾವಿದರ ಜೊತೆ ಟ್ರೇಲರ್ ಸೂಪರ್ ಹಿಟ್ ಆಗಲು ಕಾರಣವಾಗಿದ್ದು, ಚಿತ್ರದಲ್ಲಿ ಬಳಸಿದ್ದ ಗ್ರಾಫಿಕ್ಸ್. ಬಾಹುಬಲಿ ನಿರ್ದೇಶಕ ರಾಜಮೌಳಿ ಗ್ರಾಫಿಕ್ಸ್ ವೈಭವವನ್ನು ಮೆಚ್ಚಿ ಟ್ವೀಟ್ ಮಾಡಿದ್ದು ಇದಕ್ಕೆ ಉದಾಹರಣೆ. ಹೀಗಾಗಿ ಚಿತ್ರದಲ್ಲಿ ಗ್ರಾಫಿಕ್ಸ್ ಬಳಕೆ ಹೇಗಿರಲಿದೆ ಎನ್ನುವ ಕುತೂಹಲಕ್ಕಾಗಿಯಾದರೆ ಚಿತ್ರ ವೀಕ್ಷಣೆ ಮಾಡಬೇಕಿದೆ.

ಹೀಗೆ ಹತ್ತು ಹಲವು ಕಾರಣಗಳಿಂದ ಪದ್ಮಾವತಿ ಎಲ್ಲರನ್ನು ಆಕರ್ಷಿಸಲು ಯಶಸ್ವಿಯಾಗಿದೆ. ಫಸ್ಟ್ ಲುಕ್ ಮತ್ತು ಟ್ರೇಲರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ನಂಬರ್ 01 ಟ್ರೆಂಡಿಂಗ್ ಸ್ಥಾನವನ್ನು ಪಡೆದಿತ್ತು. ಸಿನಿಮಾ ಡಿಸೆಂಬರ್ 1 ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ.

Leave a Reply

Your email address will not be published. Required fields are marked *