ಮಂಗಳೂರು: ಮಂಗಳೂರಿನ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಇತ್ತಿಚೇಗೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಲ್ಲಿ ಅಶಿಸ್ತು, ಗುಂಪುಗಾರಿಕೆ, ಆಂತರಿಕ ಭಿನ್ನಾಭಿಪ್ರಾಯದ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಇದೀಗ 6 ಜನ ಅಧಿಕಾರಿಗಳ ಅಮಾನತು ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.
Advertisement
1994ರಲ್ಲಿ ಮಂಗಳೂರಿನ ಪಾಂಡೇಶ್ವರದಲ್ಲಿ ಮಹಿಳಾ ಮತ್ತು ಮಕ್ಕಳ ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರ್ಯಾರಂಭವಾದ ಮಹಿಳಾ ಪೊಲೀಸ್ ಠಾಣೆಯಲ್ಲಿ ಇತ್ತಿಚೇಗೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಕರ್ತವ್ಯ ಲೋಪ ಹಾಗೂ ಠಾಣೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಅಶಿಸ್ತು ಸಾಬೀತಾಗಿತ್ತು. ಈ ಹಿನ್ನಲೆಯಲ್ಲಿ ಒಟ್ಟು 6 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಆದೇಶಿಸಿದ್ದಾರೆ. ಇದನ್ನೂ ಓದಿ: 1 ಕಿ.ಮೀ ಓಡಿ ಕಳ್ಳನನ್ನು ಹಿಡಿದ ಮಂಗಳೂರು ಪೊಲೀಸ್ ವೀಡಿಯೋ ವೈರಲ್
Advertisement
ಜುಲೈ 27 ರಂದು ಕಂಕನಾಡಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯ ಪಿ.ಎಸ್.ಐ ರೋಸಮ್ಮ ಅಮಾನತ್ತಾಗಿದ್ದಾರೆ. ಇನ್ನೊಂದು ಘಟನೆಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿಯೇ ಮದ್ಯಪಾನ ಪಾರ್ಟಿ ಮಾಡಿದ ಆರೋಪದ ಮೇಲೆ ಇಬ್ಬರು ಎಎಸ್‍ಐ, ಒಬ್ಬ ಹೆಡ್ ಕಾನ್‌ಸ್ಟೇಬಲ್ ಇಬ್ಬರು ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು ಐವರು ಅಮಾನತ್ತು ಆಗಿದ್ದಾರೆ.
Advertisement
Advertisement
ಈ ಎರಡು ಘಟನೆಗಳ ಬಗ್ಗೆ ಕೇಂದ್ರ ಉಪವಿಭಾಗದ ಎಸಿಪಿ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ರು. ಠಾಣೆಯಲ್ಲಿ ಮದ್ಯಪಾನ ಪಾರ್ಟಿ ನಡೆಸಿರೋದು ಸಿ.ಸಿ ಕ್ಯಾಮೆರಾದಲ್ಲಿಯೂ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ವರದಿ ಆಧರಿಸಿ ಪೊಲೀಸ್ ಕಮೀಷನರ್ ಅಮಾನತು ಆದೇಶ ಹೊರಡಿಸಿದ್ದಾರೆ. ಈ ಎರಡು ಪ್ರತ್ಯೇಕ ಘಟನೆಗಳಲ್ಲಿ ಸಾಬೀತಾದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯ ಲೋಪ, ಠಾಣೆಯಲ್ಲಿ ಅಶಿಸ್ತು, ಗುಂಪುಗಾರಿಕೆ, ಆಂತರಿಕ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಎಲ್ಲಾ 32 ಅಧಿಕಾರಿ ಸಿಬ್ಬಂದಿಯನ್ನು ವರ್ಗಾವಣೆ ಸಹ ಮಾಡಲಾಗಿದೆ. ಇದರಲ್ಲಿ ಈಗಾಗಲೇ 6 ಜನ ಅಮಾನತ್ತಾಗಿದ್ದು ಉಳಿದ ಅಧಿಕಾರಿ ಸಿಬ್ಬಂದಿಗಳನ್ನು ಬೇರೆ ಬೇರೆ ಠಾಣೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಹೊಸದಾಗಿ ಮಹಿಳಾ ಪೊಲೀಸ್ ಠಾಣೆಗೆ 2 ಪಿಎಸ್‍ಐ, 1 ಹೆಚ್‍ಸಿ, 16 ಪಿಸಿಗಳನ್ನು ನಿಯುಕ್ತಿಗೊಳಿಸಲಾಗಿದೆ. ಇದನ್ನೂ ಓದಿ: ಸರ್ಕಾರಕ್ಕೆ ನಮ್ಮನ್ನು ಬಂಧಿಸುವ ಶಕ್ತಿ ಇಲ್ಲ: ಡಿ.ಕೆ. ಸುರೇಶ್
ಠಾಣೆಯ ಕರ್ತವ್ಯದಲ್ಲಿ ಗುಣಮಟ್ಟ ಸುಧಾರಣೆ, ನ್ಯಾಯ ಸಮ್ಮತ, ಪಾರದರ್ಶಕ ಕರ್ತವ್ಯ ನಿರ್ವಹಣೆಗೆ ಈ ಕ್ರಮ ಎಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ. ಒಟ್ಟಿನಲ್ಲಿ ಈ ಬೆಳವಣಿಗೆಯ ಮೂಲಕ ಕಾನೂನಿನಡಿ ಎಲ್ಲರೂ ಸಮಾನ ಎಂಬ ಸಂದೇಶವನ್ನು ಪೊಲೀಸ್ ಇಲಾಖೆ ನೀಡಿದೆ.