ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ಕಾರಿನಲ್ಲಿ 4ಕ್ಕಿಂತಲೂ ಹೆಚ್ಚಿನ ಮಂದಿ ಪ್ರಯಾಣಿಸುತ್ತಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.
ಅಪಘಾತಕ್ಕೀಡಾದ ಕಾರಿನಲ್ಲಿ ನಾಲ್ಕಲ್ಲ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು ಎಂದು ಸ್ಫೋಟಕ ಮಾಹಿತಿಯನ್ನು ಮೈಸೂರಿನ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರ ರಾವ್ ನೀಡಿದ್ದಾರೆ.
ದರ್ಶನ್ ಅವರ ಅಪಘಾತಕ್ಕೀಡಾದ ಕಾರಿನಲ್ಲಿ ನಾಲ್ಕು ಮಂದಿ ಅಲ್ಲ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು. ಕಳೆದ ಎರಡು ದಿನಗಳಿಂದ ಕಾರಿನಲ್ಲಿದ್ದಿದ್ದು ನಾಲ್ವರೇ ಎಂದು ದರ್ಶನ್ ಆಪ್ತರು ಹೇಳುತ್ತಿದ್ದರು. ಆದರೆ ಈಗ ಪೊಲೀಸ್ ಆಯುಕ್ತರ ಅಧಿಕೃತ ಹೇಳಿಕೆ ಮೂಲಕ ಕಾರಿನಲ್ಲಿ ಹೆಚ್ಚು ಮಂದಿ ಇರುವುದು ಸ್ಪಷ್ಟವಾಗಿದೆ.
ಪೊಲೀಸ್ ಎಫ್‍ಐಆರ್ ನಲ್ಲಿ ನಾಲ್ಕು ಮಂದಿ ಇದ್ದರೆ, ಆಯುಕ್ತರು ಐದು ಮಂದಿ ಕಾರಿನಲ್ಲಿ ಇದ್ದರು ಎಂದು ಹೇಳಿದ್ದಾರೆ. ಆದರೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮೆಡಿಕೋ ಲೀಗಲ್ ಕೇಸ್(ಎಂಎಲ್‍ಸಿ) ವರದಿ ಪ್ರಕಾರ ಕಾರಿನಲ್ಲಿ ಆರು ಮಂದಿ ಪ್ರಯಾಣಿಸಿದ್ದಾರೆ. ಸದ್ಯ ಅವರಲ್ಲಿ ನಾಲ್ವರು ಚಿಕಿತ್ಸೆ ಪಡೆದಿದ್ದಾರೆ. ಇನ್ನಿಬ್ಬರು ಯಾವುದೇ ಗಾಯಗಳಿಲ್ಲದೆ ಆಸ್ಪತ್ರೆಯಲ್ಲಿ ಸಹಜ ತಪಾಸಣೆ ನಿರ್ಗಮಿಸಿದ್ದಾರೆ ಎಂದು ವರದಿ ನೀಡಿದೆ.
ಎಲ್ಲ ಆಸ್ಪತ್ರೆಗಳು ಅಪಘಾತ ಅಥವಾ ಕಾನೂನಿನ ಅಡಿ ಬರುವ ವೈದ್ಯಕೀಯ ಪ್ರಕರಣಗಳನ್ನು ಎಂಎಲ್‍ಸಿ ಎಂದು ಪರಿಗಣಿಸಬೇಕಾಗುತ್ತದೆ. ಈಗ ಎಂಎಲ್‍ಸಿ, ಎಫ್‍ಐಆರ್, ಪೊಲೀಸ್ ಆಯುಕ್ತರ ಹೇಳಿಕೆಗಳಿಗೆ ಯಾವುದೇ ತಾಳೆ ಆಗದ ಕಾರಣ ಕಾರಿನಲ್ಲಿ ಇದ್ದವರು ಎಷ್ಟು? ಯಾಕೆ ಈ ವಿಚಾರವನ್ನು ಗೌಪ್ಯವಾಗಿ ಇಡಲಾಗಿದೆ ಎನ್ನುವ ಪ್ರಶ್ನೆ ಎದ್ದಿದೆ.
ನಟ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್, ಈಗ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಸದ್ಯ ಅಪಘಾತದ ಬಗ್ಗೆ ದರ್ಶನ್ ಅವರ ಡ್ರೈವರ್ ಲಕ್ಷಣ್ ನಮಗೆ ದೂರು ನೀಡಿದ್ದಾರೆ. ದೂರಿನ ಅನ್ವಯ 279, 338, 338 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಅಪಘಾತ ಸ್ಥಳದಲ್ಲಿ ಮಹಜರು ನಡೆಸಿದ್ದು ಗಾಯಾಳುಗಳ ಹೇಳಿಕೆ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಅಪಘಾತದ ವಾಹನ ವಶಕ್ಕೆ ಪಡೆದು ಆರ್ ಟಿಓ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಲಾಗಿದೆ. ಅವರ ವರದಿ ಆಧಾರದ ಮೇಲೆ ಕಾನೂನು ಪ್ರಕ್ರಿಯೆ ಮುಂದುವರಿಸುತ್ತೇವೆ. ಸದ್ಯದ ಮಾಹಿತಿ ಪ್ರಕಾರ ಕಾರಿನಲ್ಲಿ 5 ಮಂದಿ ಇದ್ದರು, ನಾಲ್ಬರಿಗೆ ಗಾಯವಾಗಿದೆ. ಕಾರು ಅಪಘಾತಕ್ಕಿಡಾಗಿದ್ದಕ್ಕೆ ಕಾರಣ ತನಿಖೆಯಿಂದಲೇ ಗೊತ್ತಾಗುತ್ತೆ. ಸದ್ಯ ತನಿಖೆ ಪ್ರಗತಿಯಲ್ಲಿರೋದರಿಂದ ಯಾವುದೇ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ. ಅಪಘಾತದ ಸ್ಥಳದಲ್ಲಿ ನಮ್ಮ ಪೊಲೀಸರು ಇದ್ದ ಬಗ್ಗೆ ಮಾಹಿತಿ ಇಲ್ಲ. ಹಾಗೇನಾದರೂ ಪೊಲೀಸರ ಸಮ್ಮುಖದಲ್ಲಿ ಕಾರು ಸ್ಥಳಾಂತರವಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ದರ್ಶನ್ ಕಾರು ಅಪಘಾತ ಪ್ರಕರಣದ ಕುರಿತು ತನಿಖೆ ನಡೆಸಲು ಪೊಲೀಸರಿಗೆ ಸಮಯ ಕೊಡಿ ಎಂದರು.
ದರ್ಶನ್ ಕಾರು ಚಾಲಕ ಲಕ್ಷ್ಮಣ್ ದೂರಿನ ಮೇರೆಗೆ ಕೇಸ್ ದಾಖಲಿಸಲಾಗಿದೆ. ಅಪಘಾತವಾದಾಗ ಕಾರಿನಲ್ಲಿ ಐವರು ಇದ್ದರು ಅಂತ ಗೊತ್ತಾಗಿದೆ, ಆರು ಜನರೂ ಇರಬಹುದು. ಎಷ್ಟು ಜನ ಇದ್ದಾರೆ ಎಂಬುದನ್ನು ತನಿಖೆ ಮೂಲಕ ತಿಳಿದುಕೊಳ್ಳಲಾಗುವುದು. ದೂರಿನ ಪ್ರಕಾರ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಅಪಘಾತವಾಗಿದೆ. ಕಾರಿನಲ್ಲಿ ತಾಂತ್ರಿಕ ದೋಷ ಇತ್ತೋ ಇಲ್ಲವೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಅದೆಲ್ಲವೂ ತನಿಖೆಯಿಂದ ಗೊತ್ತಾಗಲಿದೆ. ಕೇವಲ 24 ಗಂಟೆಗಳಲ್ಲಿ ತನಿಖೆ ಮುಗಿಸಲು ಸಾಧ್ಯವಿಲ್ಲ ಎಂದು ಸುಬ್ರಮಣ್ಯೇಶ್ವರ ರಾವ್ ಪ್ರತಿಕ್ರಿಯಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv