ಗುವಾಹಟಿ: ಭಾರೀ ಮಳೆಯಿಂದ (Rain) ಸಿಕ್ಕಿಂನ (Sikkim) ಮಂಗನ್ ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ (Sikkim Floods) 6 ಮಂದಿ ಸಾವಿಗೀಡಾಗಿದ್ದು, 1,200ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಹಲವು ರಾಜ್ಯಗಳ 1,200ಕ್ಕೂ ಹೆಚ್ಚು ಪ್ರವಾಸಿಗರು, ಬಾಂಗ್ಲಾದೇಶದ 10, ನೇಪಾಳದ 3 ಹಾಗೂ ಥೈಲ್ಯಾಂಡ್‍ನ ಇಬ್ಬರು ಸೇರಿ ಒಟ್ಟು 15 ವಿದೇಶಿ ಪ್ರವಾಸಿಗರು ಮಂಗನ್ ಪಟ್ಟಣದಿಂದ ಸುಮಾರು 50 ಕಿಮೀ ದೂರದಲ್ಲಿರುವ ಲಾಚುಂಗ್ ಗ್ರಾಮದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿಕ್ಕಿಬಿದ್ದ ಪ್ರವಾಸಿಗರನ್ನು ವಿಮಾನದಲ್ಲಿ ಕರೆತರಲು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿ.ಬಿ ಪಾಠಕ್ ಕೇಂದ್ರದೊಂದಿಗೆ ಮಾತುಕತೆ ನಡೆಸಿದ್ದಾರೆ. ಮಳೆ ಮುಂದುವರಿದರೆ ರಸ್ತೆ ಮಾರ್ಗದ ಮೂಲಕ ಕರೆತರುವ ಪ್ರಯತ್ನ ಮಾಡಲಾಗುತ್ತದೆ. ಪ್ರವಾಹದಿಂದ ರಸ್ತೆ ಮಾರ್ಗಗಳು ಹಾನಿಗೀಡಾಗಿದ್ದು, ಸಂಪರ್ಕವನ್ನು ಪುನಃಸ್ಥಾಪಿಸಲು ಒಂದು ವಾರ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ
ಮಂಗನ್ ಜಿಲ್ಲೆಯಲ್ಲಿನ ಭೂಕುಸಿತದಲ್ಲಿ ಪಕ್ಷೆಪ್ ಮತ್ತು ಅಂಭಿತಾಂಗ್‍ನಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ, ಕೆಲವರು ಗಾಯಗೊಂಡಿದ್ದಾರೆ. ಸದ್ಯ ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಪಕ್ಷೇಪ್‍ನಲ್ಲಿ ಪರಿಹಾರ ಶಿಬಿರ ಸ್ಥಾಪಿಸಲಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ಮಂಗನ್ ಜಿಲ್ಲಾಡಳಿತಕ್ಕೆ ಆದಷ್ಟು ಬೇಗ ಪರಿಹಾರ ಧನ ನೀಡುವಂತೆ ತಿಳಿಸಲಾಗಿದೆ ಎಂದು ವಿ.ಬಿ ಪಾಠಕ್ ತಿಳಿಸಿದ್ದಾರೆ.
ಇನ್ನೂ ಆ ಭಾಗದ ಗ್ಲೇಶಿಯಲ್ ಸರೋವರಗಳಿಂದ ಯಾವುದೇ ಬೆದರಿಕೆಗಳಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಿಕ್ಕಿಂನ 15 ಗ್ಲೇಶಿಯಲ್ ಸರೋವರಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಈ ವಿಚಾರವಾಗಿ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ಮತ್ತು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಪ್ರವಾಹ ಪರಿಸ್ಥಿತಿ ಎದರಿಸಲು ಸಾಕಷ್ಟು ಆಹಾರ ಸಂಗ್ರಹಣೆ ಇದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಹಿಂದೆ ಪಾಕ್ ಕೈವಾಡ – ರಹಸ್ಯ ಬಯಲು!