Bengaluru City
ಅಮೆಜಾನ್‍ಗೂ ತಟ್ಟಿದ ಕೊರೊನಾ – 6 ನೌಕರರಿಗೆ ಸೋಂಕು

– ತಾತ್ಕಾಲಿಕವಾಗಿ ವ್ಯಾಪಾರ ಸ್ಥಗಿತಗೊಳಿಸಿದ ಫ್ಲಿಪ್‍ಕಾರ್ಟ್
ವಾಷಿಂಗ್ಟನ್/ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಬಹುತೇಕ ಮಂದಿ ಆನ್‍ಲೈನ್ ಶಾಪಿಂಗ್ ಮೊರೆ ಹೋಗುತ್ತಿದ್ದಾರೆ. ಆದರೆ ಈಗ ಮಹಾಮಾರಿ ಕೊರೊನಾ ಆನ್‍ಲೈನ್ ವ್ಯವಹಾರಕ್ಕೂ ಅಡ್ಡಿಮಾಡುತ್ತಿದೆ.
ಹೌದು. ಅಮೆರಿಕದಲ್ಲಿ ಅಮೆಜಾನ್ ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ 6 ಮಂದಿ ನೌಕರರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮಾಧ್ಯಮವೊಂದು ವರದಿಮಾಡಿದೆ.
ಅಮೆರಿಕದ ನ್ಯೂ ಯಾರ್ಕ್ ಸಿಟಿ, ಜಾಕ್ಸನ್ ವಿಲ್ಲೆ, ಫ್ಲೋರಿಡಾ, ಶೆಪೆರ್ಡ್ಸ್ ವಿಲ್ಲೆ, ಕೆಂಟುಕಿ, ಕಾಟಿ, ಟೆಕ್ಸಾಸ್, ಬ್ರೌನ್ ಸ್ಟೌನ್, ಮಿಚಿಗನ್ ಮತ್ತು ಒಕ್ಲಹೊಮಾ ನಗರಗಳಲ್ಲಿ ಅಮೆಜಾನ್ ಕಂಪನಿಯ ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ 6 ಮಂದಿ ನೌಕರರಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸೋಂಕಿತರ ಸಂಪರ್ಕದಲ್ಲಿದ್ದ ಇತರೆ ನೌಕಕರು ಸ್ವತಃ ತಮ್ಮನ್ನು ತಾವೇ ಗೃಹಬಂಧನದಲ್ಲಿಟ್ಟುಕೊಂಡಿದ್ದಾರೆ.
ಇತ್ತ ಕೊರೊನಾ ಮರಣಮೃದಂಗ ಬಾರಿಸುತ್ತಿರುವ ಇಟಲಿ, ಸ್ಪೈನ್‍ಗಳಲ್ಲಿ ಅಮೆಜಾನ್‍ನಲ್ಲಿ ಕೆಲಸ ಮಾಡುತ್ತಿರುವ ಕೆಲ ಕಾರ್ಮಿಕರಲ್ಲಿ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ಹಿನ್ನೆಲೆ ತಮ್ಮ ಆರೋಗ್ಯಕ್ಕೆ ರಕ್ಷಣೆ ನೀಡಬೇಕೆಂದು ಅಮೆಜಾನ್ ಕಂಪನಿಯ ಸುಮಾರು 1,500 ಕಾರ್ಮಿಕರು ಸಹಿ ಹಾಕಿ ಮೇಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಅಷ್ಟೇ ಅಲ್ಲದೇ ಫ್ಲಿಪ್‍ಕಾರ್ಟ್ ಕೂಡ ಇಂದಿನಿಂದ ತನ್ನ ಕಾರ್ಯಚಟುವಟಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. ಆನ್‍ಲೈನ್ ಮೂಲಕ ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಜನರು ಪಡೆದುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆದರೆ ಕೊರೊನಾ ಭೀತಿಗೆ ಇಂದಿನಿಂದ ದಿನಸಿ, ದೊಡ್ಡ ಮತ್ತು ಸಣ್ಣ ಮಟ್ಟದ ಸಾಮಗ್ರಿಗಳ ಪೂರೈಕೆಯನ್ನು ಫ್ಲಿಪ್‍ಕಾರ್ಟ್ ಸ್ಥಗಿತಗೊಳಿಸಿದೆ.
