ರಾಮನಗರ: ದ್ವೇಷದ ಹಿನ್ನೆಲೆಯಲ್ಲಿ ಆರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಹಾಗೂ ಮಾವಿನ ಸಸಿಗಳನ್ನು ಕತ್ತರಿಸಿ ನಾಶ ಮಾಡಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಗೇರಹಳ್ಳಿಯಲ್ಲಿ ನಡೆದಿದೆ.
ಸಾತನೂರು ಸಮೀಪದ ಗೇರಹಳ್ಳಿ ಗ್ರಾಮದ ರೈತ ಚಿಕ್ಕಪುಟ್ಟೇಗೌಡ ಅವರಿಗೆ ಸೇರಿದ ತೋಟ ಇದಾಗಿದ್ದು, ರಾತ್ರೋರಾತ್ರಿ ತೋಟಕ್ಕೆ ನುಗ್ಗಿರುವ ಕಿಡಿಗೇಡಿಗಳು ಮುಚ್ಚಿನಿಂದ ಬಾಳೆ ಬೆಳೆ ಹಾಗೂ ಮಾವಿನ ಸಸಿಗಳನ್ನು ಕತ್ತರಿಸಿ ಹಾಕಿದ್ದಾರೆ.
Advertisement
Advertisement
ದುಷ್ಕರ್ಮಿಗಳ ಈ ಕೃತ್ಯದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದ್ದು, ರೈತ ಚಿಕ್ಕಪುಟ್ಟೇಗೌಡ ಕಂಗಾಲಾಗಿದ್ದಾರೆ. ಸುಮಾರು 12 ಲಕ್ಷ ರೂ. ವೆಚ್ಚ ಮಾಡಿ ಬಾಳೆ ಹಾಗೂ ಮಾವು ಸಸಿಗಳನ್ನು 6 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದರು. ಬಾಳೆ ಸಸಿಗಳೆಲ್ಲ ಗೊನೆ ಬಿಡುವ ಹಂತಕ್ಕೆ ತಲುಪಿದ್ದರೆ, ನೂರಾರು ಗಿಡಗಳು ಈಗಾಗಲೇ ಬಾಳೆಗೊನೆಯನ್ನು ಬಿಟ್ಟಿದ್ದವು. ಆದರೆ ಇದೀಗ ಸಂಪೂರ್ಣ ತೋಟವೇ ನಾಶ ಮಾಡಿರುವುದು ರೈತನಿಗೆ ಅಘಾತ ತಂದಿದೆ.
Advertisement
ಘಟನೆ ಸಂಬಂಧ ಸ್ಥಳಕ್ಕೆ ಸಾತನೂರು ಪೊಲೀಸರು ಹಾಗೂ ಶ್ವಾನದಳ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬೆಳೆ ನಾಶ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂಬ ಮಾಹಿತಿ ಲಭಿಸಿದೆ.