ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ್ದ 7 ಮಂದಿ ಕಾಂಗ್ರೆಸ್ ನಗರಸಭಾ ಸದಸ್ಯರನ್ನು ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 17ನೇ ವಾರ್ಡಿನ ಸದಸ್ಯ ಎಸ್.ಎಂ.ರಫೀಕ್, 21ನೇ ವಾರ್ಡಿನ ಆಫ್ಜಲ್, 28ನೇ ವಾರ್ಡಿನ ಎನ್.ಎಸ್.ಚಂದ್ರಶೇಖರ್, 30ನೇ ವಾರ್ಡಿನ ಮೀನಾಕ್ಷಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವಾಗಿ ಮತ ಚಲಾಯಿಸಿದ್ದರು. ಇನ್ನೂ 2ನೇ ವಾರ್ಡಿನ ರತ್ನಮ್ಮ ಹಾಗೂ 3ನೇ ವಾರ್ಡಿನ ಶಕೀಲಾ ಭಾನು ಹಾಗೂ 22ನೇ ವಾರ್ಡಿನ ಸ್ವಾತಿ ಚುನಾವಣೆಗೆ ಗೈರು ಹಾಜರಾಗಿದ್ದರು. ಹೀಗಾಗಿ 31 ಸದಸ್ಯ ಬಲಾಬಲದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 16 ಮಂದಿ ಕಾಂಗ್ರೆಸ್ ಸದಸ್ಯರನ್ನು ಹೊಂದಿದ್ರೂ ಅಧ್ಯಕ್ಷ ಸ್ಥಾನ ಹಿಡಿಯುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿತ್ತು.
Advertisement
Advertisement
ಚುನಾವಣೆಯಲ್ಲಿ ಸುಧಾಕರ್ ಬೆಂಬಲಿಗ ಪಕ್ಷೇತರ ಅಭ್ಯರ್ಥಿ ಆನಂದ್ ರೆಡ್ಡಿ 22 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸ್ವತಃ ಕಾಂಗ್ರೆಸ್ ಪಕ್ಷದ ಸದಸ್ಯರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ವಿರುದ್ಧವಾಗಿ ಮತಚಲಾಯಿಸಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಉಂಟಾಗಿತ್ತು. ಇದರಿಂದ ಸದ್ಯ 7 ಮಂದಿ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಪಕ್ಷದ ಪ್ರಾಥಮಿಕ ಸ್ಥಾನದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ನಗರಸಭೆ ಚುನಾವಣೆ – ಅಪರೇಷನ್ ಕಮಲ ಸಕ್ಸಸ್