ನವದೆಹಲಿ: 59 ಅಪ್ಲಿಕೇಶನ್‌ಗಳು ನಿಷೇಧಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಚೀನಾಗೆ ಮತ್ತೊಂದು ಶಾಕ್ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಚೀನಾದ ಕಂಪನಿಗಳಿಗೆ ಇನ್ನು ಮುಂದೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.
ಕೇಂದ್ರ ರಸ್ತೆ ಸಾರಿಗೆ ಖಾತೆಯ ಸಚಿವ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಚೀನಾ ಕಂಪನಿಗಳಿಗೆ ಅನುಮತಿ ನೀಡುವುದಿಲ್ಲ. ಚೀನಾ ಹೂಡಿಕೆ ಇರುವ ಸಹಭಾಗಿತ್ವದ ಕಂಪನಿಗಳಿಗೂ ಇದು ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಮೈಕ್ರೋ, ಸಣ್ಣ, ಮಧ್ಯಮ ಉದ್ಯಮಗಳಲ್ಲೂ ಚೀನಾಗೆ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಈಗಾಗಲೇ ಚೀನಾದ ಕಂಪನಿಗಳ ಜೊತೆ ಮಾಡಿಕೊಂಡಿರುವ ಒಪ್ಪಂದಗಳ ಅನ್ವಯ ನಡೆಯುತ್ತಿರುವ ಯೋಜನೆಗಳ ಮೇಲೆ ನಿಷೇಧ ನಿರ್ಧಾರ ಪರಿಣಾಮ ಬೀಳುವುದಿಲ್ಲ. ಭವಿಷ್ಯದ ಯೋಜನೆ ಮತ್ತು ಟೆಂಡರ್ ನೀಡುವಾಗ ಇವುಗಳನ್ನು ಪರಿಗಣಿಸಲಾಗುತ್ತದೆ.
Advertisement
ನಮ್ಮ ಕಂಪನಿಗಳು ದೊಡ್ಡ ಯೋಜನೆಗಳನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ. ತಾಂತ್ರಿಕ ಮತ್ತು ಹಣಕಾಸು ವಿಷಯದಲ್ಲಿ ಕೆಲ ವಿನಾಯಿತಿ ನೀಡಿ ದೇಶೀಯ ಕಂಪನಿಗಳು ಈ ಟೆಂಡರ್‌ನಲ್ಲಿ ಅರ್ಹತೆ ಪಡೆಯುವಂತೆ ನಿಯಮ ರೂಪಿಸಲು ಸಭೆ ನಡೆಸುವಂತೆ ಹೆದ್ದಾರಿ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ಗಡ್ಕರಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಬ್ಯಾನ್ ಬಳಿಕ ಟಿಕ್ ಟಾಕ್‌ಗೆ ಮತ್ತೊಂದು ಶಾಕ್
Advertisement
ಒಬ್ಬ ಗುತ್ತಿಗೆದಾರ ಸಣ್ಣ ಯೋಜನೆಗೆ ಅರ್ಹತೆ ಪಡೆಯುತ್ತಾನೆ ಎಂದರೆ ಆತ ದೊಡ್ಡ ಯೋಜನೆ ಪಡೆದುಕೊಳ್ಳಲು ಅರ್ಹನಾಗುತ್ತಾನೆ. ನಾವು ನಮ್ಮ ಕಂಪನಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವೇಳೆ ವಿದೇಶಿ ಹೂಡಿಕೆ ವಿಚಾರವಾಗಿ ಮಾತನಾಡಿದ ಅವರು, ತಂತ್ರಜ್ಞಾನ, ಸಂಶೋಧನೆ, ಕನ್ಸಲ್ಟೆಂಟಿನ್ಸಿ ಮತ್ತು ಇತರೇ ಕ್ಷೇತ್ರದ ಕಂಪನಿಗಳಲ್ಲಿ ನಾವು ವಿದೇಶಿ ಹೂಡಿಕೆಯನ್ನು ಪ್ರೋತ್ಸಾಹಿಸುತ್ತೇವೆ. ಆದರೆ ಚೀನಾದ ಕಂಪನಿಗಳ ಹೂಡಿಕೆಯನ್ನು ಮಾತ್ರ ನಾವು ಪ್ರೋತ್ಸಾಹಿಸುವುದಿಲ್ಲ ಎಂದು ಖಡಕ್ ಆಗಿಯೇ ಹೇಳಿದರು.
ಸರ್ಕಾರ ನಮ್ಮ ದೇಶದ ಕೈಗಾರಿಕೆ ಮತ್ತು ಉದ್ಯಮಗಳು ಸ್ವಾವಲಂಬನೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಚೀನಾದಿಂದ ಆಮದು ಕಡಿಮೆಯಾದಾಗ ಆತ್ಮನಿರ್ಭರ್ ಭಾರತ್ ಅಭಿಯಾನಕ್ಕೆ ಬಲ ಬರುತ್ತದೆ. ಮುಂದೆ ಇದು ಭಾರತಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು.
ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಜೊತೆಗಿ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಚೀನಾ ವಿರುದ್ಧ ದೇಶಾದ್ಯಂತ ಅಭಿಯಾನ ಆರಂಭವಾಗಿದೆ. ಈಗಾಗಲೇ ಹಲವು ರಾಜ್ಯ ಸರ್ಕಾರಗಳು ಚೀನಾ ಕಂಪನಿಗಳ ಜೊತೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ರದ್ದು ಮಾಡಿವೆ. ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಹುತಾತ್ಮರಾದ ಸೈನಿಕರ ಬಲಿದಾನವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು. ಭಾರತ ಸರ್ಕಾರ ಸೋಮವಾರ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಮೊದಲ ಬಾರಿಗೆ ಚೀನಾಗೆ ಶಾಕ್ ನೀಡಿತ್ತು.