ನವದೆಹಲಿ: ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಯೋಧರ ಹತ್ಯೆಗೆ ಪ್ರತೀಕಾರವಾಗಿ 59 ಅಪ್ಲಿಕೇಶನ್‌ನಗಳನ್ನು ನಿಷೇಧಿಸಿದ ಬೆನ್ನಲ್ಲೇ ಈಗ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಜೊತೆ ನೇರವಾಗಿ ಗುರುತಿಸಿಕೊಂಡಿರುವ 7 ಪ್ರಮುಖ ಕಂಪನಿಗಳ ವಿರುದ್ಧ ಕ್ರಮ ಜರುಗಿಸಲು ಭಾರತ ಸರ್ಕಾರ ಮುಂದಾಗಿದೆ.
ಹುವಾವೇ, ಅಲಿಬಾಬಾ, ಕ್ಷಿಇಂಡಿಯಾ ಸ್ಟೀಲ್ಸ್, ಕ್ಸಿನ್ಸಿಂಗ್ ಕ್ಯಾಥೆ ಇಂಟರ್ ನ್ಯಾಷನಲ್, ಚೀನಾ ಇಲೆಕ್ಟ್ರಾನಿಕ್ ಟೆಕ್ನಾಲಜಿ ಗ್ರೂಪ್, ಟೆನ್ಸೆಂಟ್ ಮತ್ತು ಎಸ್‌ಎಐಸಿ ಮೋಟಾರ್ ಕಾರ್ಪೊರೇಷನ್ ಕಂಪನಿಗಳ ಮೇಲೆ ಸರ್ಕಾರ ನಿಗಾವಹಿಸಿದೆ ಎಂದು ಮೂಲಗಳು ತಿಳಿಸಿವೆ.
2017ರಲ್ಲಿ ಚೀನಾ ತನ್ನ ಗುಪ್ತಚರ ಕಾನೂನಿಗೆ ತಿದ್ದುಪಡಿ ತಂದಿದೆ. ಈ ಕಾನೂನಿನ ಪ್ರಕಾರ ಸರ್ಕಾರದ ಜಂಟಿ ಸಹಭಾಗಿತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಗುಪ್ತಚರ ಇಲಾಖೆಗೆ ಮಾಹಿತಿ ನೀಡುವ ಅಧಿಕಾರವನ್ನು ಹೊಂದಿರುತ್ತದೆ. ಗುಪ್ತಚರ ಕೆಲಸವನ್ನು ಬೆಂಬಲಿಸಿ, ಸಹಾಯ ಮಾಡುವ ಸಂಸ್ಥೆಗಳನ್ನು ಚೀನಾ ಸರ್ಕಾರ ರಕ್ಷಣೆ ಮಾಡಲಿದೆ.
ಈಗಾಗಲೇ 5ಜಿ ವಿಚಾರಕ್ಕೆ ಸಂಬಂಧಿಸಿದಂತೆ ಹುವಾವೇ ಈಗಾಗಲೇ ಅಮೆರಿಕ, ಜಪಾನ್, ಬ್ರಿಟನ್, ಆಸ್ಪ್ರೇಲಿಯಾ ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ಹುವಾವೇ ಟೆಲಿಕಾಂ ಕಂಪನಿಯ ಸ್ಥಾಪಕ ರೆನ್ ಝೆಂಗ್‌ಫೆಯ್, ಪಿಎಲ್‌ಎಯ ಎಂಜಿನಿಯರಿಂಗ್ ವಿಭಾಗದ ಮಾಜಿ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಹುವಾವೇ ಇಂಡಿಯಾ 2018-19ರಲ್ಲಿ 12,800 ಕೋಟಿ ರೂ. ಆದಾಯವನ್ನು ಸಂಪಾದಿಸಿತ್ತು.
ಅಲಿಬಾಬಾ, ಬೈಡು, ಟೆನ್ಸೆಂಟ್ ಕಂಪನಿಗಳು ಸೇನೆಯ ಭಾಗವಾಗಿ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಶ್ವದ ಶತಕೋಟಿ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿರುವ ಜ್ಯಾಕ್ ಮಾ ಮಾಲೀಕತ್ವದ ಅಲಿಬಾಬಾ ಸಂಸ್ಥೆ ಪೇಟಿಎಂ, ಝೊಮೆಟೋ, ಬಿಗ್ ಬಾಸ್ಕೆಟ್ ಸೇರಿದಂತೆ ಭಾರತದ ಪ್ರಸಿದ್ಧ ಕಂಪನಿಗಳಲ್ಲಿ ನೂರಾರು ಕೋಟಿ ರು. ಹೂಡಿಕೆ ಮಾಡಿದೆ. ಇಂಟರ್‌ನೆಟ್ ಕಂಪನಿಯಾದ ಟೆನ್ಸೆಂಟ್ ಫ್ಲಿಪ್‌ಕಾರ್ಟ್‌ನಲ್ಲಿ 5,300 ಕೋಟಿ ರೂ., ಓಲಾ ಕ್ಯಾಬ್‌ನಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ.
ಶಾಂಘೈ ಅಟೋಮೊಟಿವ್ ಇಂಡಸ್ಟ್ರಿ ಕಾರ್ಪೊರೇಷನ್(ಎಸ್‌ಎಐಸಿ) ಚೀನಾದ ಅಟೊಮೊಬೈಲ್ ಕಂಪನಿ ಭಾರತದಲ್ಲಿ ಎಂಜಿ ಹೆಕ್ಟರ್ ಹೆಸರಿನಲ್ಲಿ ಎಸ್‌ಯುವಿ(ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್) ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಕಂಪನಿಯ ಅಂಗಸಂಸ್ಥೆ ನಾನ್ಜಿಂಗ್ ಅಟೋಮೊಬೈಲ್ ಈ ಹಿಂದೆ ಪಿಎಲ್‌ಎಗೆ ವಾಹನಗಳನ್ನು ವಿತರಣೆ ಮಾಡುತ್ತಿತ್ತು. ಕ್ಸಿನ್ಸಿಂಗ್ ಕ್ಯಾಥೆ ಇಂಟರ್ ನ್ಯಾಷನಲ್ ಗ್ರೂಪ್ ಲೋಹ ಉದ್ಯಮ ಕಂಪನಿಯಾಗಿದ್ದು, ಆಂಧ್ರ ಪ್ರದೇಶದಲ್ಲಿ 2018ರಲ್ಲಿ 320 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದೆ.
ಭಾರತದಲ್ಲಿ ವಿದೇಶಿ ಹೂಡಿಕೆಗೆ ಅನುಮತಿ ಇರುವ ಕಾರಣ ಚೀನಾದ ಕಂಪನಿಗಳು ಇಲ್ಲಿ ಹೂಡಿಕೆ ಮಾಡುತ್ತಿವೆ. ಆದರೆ ಇನ್ನು ಮುಂದೆ ವಿದೇಶಿ ಹೂಡಿಕೆ ವಿಚಾರದಲ್ಲಿ ಕೆಲ ನಿಯಮಗಳನ್ನು ಅಳವಡಿಸಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.