ಬೆಂಗಳೂರು: ಮಕ್ಕಳ ಆಸರೆಯಲ್ಲಿ ಇರಬೇಕಾದ 58 ವರ್ಷದ ಶಾಂತಿ ಆಟೋ ಓಡಿಸಿಕೊಂಡು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ.
ಶಾಂತಿ ಅವರಿಗೆ ಇಬ್ಬರು ಮಕ್ಕಳು. ಮಗ ಬೇರೆ ಕಡೆ ವಾಸವಾಗಿದ್ದಾನೆ. ಮಗಳು ಸಾವನ್ನಪ್ಪಿದ್ದಾರೆ. ಆದರೆ ಮಗಳ ಮಗನನ್ನು ಓದಿಸುವ ಜವಾಬ್ದಾರಿ ಶಾಂತಿಯವರ ಮೇಲಿದೆ. ಕಳೆದ 25 ವರ್ಷಗಳಿಂದಲೂ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ಶಾಂತಿ ಇತರ ಮಹಿಳೆಯರಿಗೂ ಮಾದರಿಯಾಗಿದ್ದಾರೆ.
ಪತಿ ಟೈಲರಿಂಗ್ ಮಾಡುತ್ತಿದ್ದು, ಶಾಂತಿಯವರು ಮೊದಲಿಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆದ್ರೆ ಬೇರೆಯವರ ಅಡಿಯಲ್ಲಿ ಕೆಲಸ ಮಾಡಲು ಇಷ್ಟಪಡದೇ 1993ರಿಂದ ಆಟೋ ಓಡಿಸೋ ಕಾಯಕ ಮಾಡಿಕೊಂಡು ಬಂದಿದ್ದಾರೆ. ಇಷ್ಟು ಹಿರಿಯ ವಯಸ್ಸಿನಲ್ಲೂ ಆಟೋ ಓಡಿಸುತ್ತಿರುವ ಶಾಂತಿಯವರ ಸ್ವಾಭಿಮಾನಕ್ಕೆ ಅಕ್ಕ-ಪಕ್ಕದ ಮನೆಯವರೂ ಸಹ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲಸ ಸಿಗಲಿಲ್ಲ ಅಂತ ವಯಸ್ಸಿಗೆ ಬಂದ ಮಕ್ಕಳೇ ಪೋಷಕರನ್ನು ನೆಚ್ಚಿಕೊಂಡಿರ್ತಾರೆ. ಆದ್ರೆ ಈ ಹಿರಿಯ ವಯಸ್ಸಿನಲ್ಲೂ ಸ್ವಾಭಿಮಾನದ ಬದುಕು ನಡೆಸ್ತಿರುವ ಶಾಂತಿ ಯುವಪೀಳಿಗೆಗೆ ಮಾದರಿಯಾಗಿದ್ದಾರೆ.