ಗಾಂಧಿನಗರ: ಕುಟುಂಬದಲ್ಲಿ 55 ವರ್ಷದ ಬಳಿಕ ಹೆಣ್ಣು ಮಗು ಜನಿಸಿದ ಸಂತೋಷದಲ್ಲಿ ಇಡೀ ಕುಟುಂಬಸ್ಥರು ಪಟಾಕಿ ಸಿಡಿಸಿ, ಡಿಜೆ ಹಾಕಿ ಸಂಭ್ರಮಿಸಿದ್ದಾರೆ. ಶನಿವಾರ ಗ್ರಾಮದಲ್ಲಿ ಮೆರವಣಿಗೆ ಮೂಲಕ ಹೆಣ್ಣು ಮಗುವನ್ನು ಮನೆಗೆ ಕರೆತಂದಿದ್ದಾರೆ.
ಗುಜರಾತ್ ರಾಜ್ಯದ ದಾಹೋದ ಜಿಲ್ಲೆಯ ಲಿಮಖೇಡಾ ಗ್ರಾಮದ ದಿನೇಶ್‍ಭಾಯಿ ಶಾ ಎಂಬವರ ಕುಟುಂಬದಲ್ಲಿ 55 ವರ್ಷಗಳ ನಂತರ ಹೆಣ್ಣು ಮಗವೊಂದು ಜನಿಸಿದೆ. 55 ವರ್ಷಗಳ ಹಿಂದೆ ದಿನೇಶ್ ಅವರ ಅಕ್ಕ ಈ ಕುಟುಂಬದಲ್ಲಿ ಜನಿಸಿದ್ರು. ದಿನೇಶ್ ನಂತರ ಇಬ್ಬರು ಸಹೋದರರು ಜನಿಸಿದ್ರು.
ದಿನೇಶ್ ಮತ್ತು ಅವರ ಸಹೋದರರಿಗೂ ಮದುವೆ ಆದ್ರೂ ಮೂವರಿಗೂ ಗಂಡು ಮಕ್ಕಳೇ ಹುಟ್ಟಿದ್ದವು. ಹೀಗಾಗಿ ಬಹು ವರ್ಷಗಳಿಂದ ಕುಟುಂಬಸ್ಥರು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ರು.
ಮೇ 24ರಂದು ದಿನೇಶ್ ಅವರ ಹಿರಿಯ ಪುತ್ರ ಚಿರಾಗ್ ಶಾ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗು ಜನಿಸಿದ ಸುದ್ದಿ ಕೇಳುತ್ತಿದ್ದಂತೆಯೇ ದಿನೇಶ್ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಸಂಭ್ರಮ ಆಚರಿಸಿದ್ದಾರೆ.
ಶನಿವಾರ ತಾಯಿಯೊಂದಿಗೆ ಮಗುವನ್ನು ಮೆರವಣಿಗೆ ಮೂಲಕ ಮನೆಗೆ ಕರೆತಂದಿದ್ದಾರೆ.