ಬೆಳಗಾವಿ: ದೇಹದಾರ್ಢ್ಯ ಸೇರಿದಂತೆ ದೇಹ ದಂಡಿಸುವ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಬಹುತೇಕ ಮಾಂಸಾಹಾರಿ ಆಗಿರುತ್ತಾರೆ. ಆದರೆ ಸಸ್ಯಾಹಾರಿ ಸೇನಾಧಿಕಾರಿಯೊಬ್ಬರು ಮಲೇಷಿಯಾದಲ್ಲಿ ನಡೆದ ಐರನ್ ಮ್ಯಾನ್ ಕಠಿಣ ದೇಹ ದಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಇತ್ತೀಚೆಗೆ ಮಲೆಷ್ಯಾದಲ್ಲಿ ನಡೆದ ಐರನ್ ಮ್ಯಾನ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಅದರಲ್ಲಿ ಪ್ರಥಮ ಸ್ಥಾನ ಪಡೆದು ಶಂಕರ್ ಕರಜಗಿ ಕೀರ್ತಿ ತಂದಿದ್ದಾರೆ. ಶಂಕರ್ ಕರಜಗಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿಯಾಗಿದ್ದು, ಭಾರತ ಪೆಟ್ರೋಲಿಯಂ ಕರ್ನಾಟಕದ ಹೆಡ್ ಹಾಗೂ ಟೆರಿಟರಲ್ ಆರ್ಮಿಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
17 ಗಂಟೆಯ ಅವಧಿಯಲ್ಲಿ ಶಂಕರ್ ಅವರು 3 ಕಿ.ಮೀ ಸಮುದ್ರದಲ್ಲಿ ಈಜುವ, 42 ಕಿ.ಮೀ ಬೆಟ್ಟ ಗುಡ್ಡಗಳಲ್ಲಿ ಓಡುವ ಹಾಗೂ 40 ಡಿಗ್ರಿ ತಾಪಮಾನವಿರುವ ಬೆಟ್ಟ ಗುಡ್ಡಗಳ ಸಾಲಿನಲ್ಲಿ 180 ಕಿ.ಮೀ ಸೈಕಲ್ ಸವಾರಿ ಮಾಡುವ ಚಾಲೆಂಜ್ ಸ್ವೀಕರಿಸಿ 15 ಗಂಟೆ 43 ನಿಮಿಷಗಳಲ್ಲಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಐರನ್ ಮ್ಯಾನ್ ಪ್ರಶಸ್ತಿ ಪಡೆದು ಭಾರತೀಯ ಸೇನೆ ಹಾಗು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸೇನಾಧಿಕಾರಿ ಅವರ ಈ ಸಾಧನೆಗೆ ಮೆಚ್ಚಿ ಸೇನಾ ಮೆಡಲ್ ಪುರಸ್ಕಾರ ನೀಡುವಂತೆ ಸೇನಾಧಿಕಾರಿಗಳು ಶಿಪಾರಸ್ಸು ಮಾಡಿದ್ದಾರೆ.
ಇಷ್ಟೆಲ್ಲ ಸಾಧನೆ ಮಾಡಿರುವ ಶಂಕರ್ ಅವರು ಯಾವುದೇ ನಾನ್ ವೆಜ್ ಆಹಾರ ಸ್ವೀಕರಿಸದೆ ಕೇವಲ ಸಸ್ಯಾಹಾರಿಯಾಗಿರುವುದು ವಿಶೇಷ ಸಂಗತಿ. ಇಷ್ಟೆಲ್ಲಾ ದೇಹ ದಂಡಿಸುವ ಸ್ಪರ್ಧೆ ಮಾಡಿದರು ಮೊಟ್ಟೆಯನ್ನು ಕೂಡ ಶಂಕರ್ ಅವರು ಸೇವಿಸುವುದಿಲ್ಲ. ರಾತ್ರಿ ಊಟ ಕೂಡ ಮಾಡದೆ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಶಂಕರ್ ಅವರಿಗೆ ಸದ್ಯ 53 ವಯಸ್ಸು ಈ ವಯಸ್ಸಿನಲ್ಲಿ ಗಣನೀಯ ಪ್ರಮಾಣದ ಸಾಹಸ ಸಾಧನೆ ಮಾಡಿರುವ ಶಂಕರ್ ಅವರನ್ನು ಇತ್ತೀಚೆಗೆ ಕುಟುಂಬಸ್ಥರು ಸತ್ಕರಿಸಿ ಸನ್ಮಾನಿಸಿದರು.