ಬೆಂಗಳೂರು: ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ತೆಲುಗು, ಹಿಂದಿಯಲ್ಲಿ ರಾಷ್ಟ್ರಪ್ರಶಸ್ತಿ ಬಂದಿತ್ತು. ಆದರೆ ಅವರು ಪ್ರೀತಿಸುತ್ತಿದ್ದ ಕನ್ನಡ ಭಾಷೆಯ ಹಾಡಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿರಲಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಬಹಳ ಕೊರಗಿತ್ತು. ಆದರೆ ಕೊನೆಗೂ ಕನ್ನಡ ಚಿತ್ರಕ್ಕೂ ಅವರಿಗೆ ಪ್ರಶಸ್ತಿ ಸಿಕ್ಕಿತ್ತು. ಆದರೆ ಪ್ರಶಸ್ತಿ ಪಡೆಯಲು ಕಾರಣವಾಗಿದ್ದ ಹಾಡನ್ನು ಅಭ್ಯಾಸ ಮಾಡಲು ಅವರು ಎಷ್ಟು ಪ್ರಯತ್ನ ಪಟ್ಟಿದ್ದರು ಎಂಬುದನ್ನು ಸಂಗೀತಾ ನಿರ್ದೇಶಕ ಹಂಸಲೇಖ ಇಂದು ಹಂಚಿಕೊಂಡಿದ್ದಾರೆ.
Advertisement
ಎಸ್ಪಿಬಿ ಕರ್ನಾಟಕಕ್ಕೆ ನಮಸ್ಕಾರ. ಅವರ ಹಾಡು ಅವರ ಜಗತ್ತು ದೊಡ್ಡದು. ಹಿಮಾಲಯ ಯಾವತ್ತೂ ಕರಗಲ್ಲ ಅನ್ನುತ್ತಿದ್ವಿ. ಆದರೆ ಕರಗಿ ಬಿಡ್ತು. ನಾವೆಲ್ಲ ಭಾವನೆ ಮೂಲಕವೇ ಬದುಕಿದ್ದೀವಿ. ಎಸ್ಪಿಬಿ ಪ್ರತಿಭೆ ಕಂಡು ಹಿಡಿದಿದ್ದು ಜಾನಕಮ್ಮ. ಸಂಗೀತದ ಭಾವನಾತ್ಮಕತೆ ಎಲ್ಲರಿಗೂ ಬರಲ್ಲ. ಇಂದು ಅವರು ಬಾರದ ಲೋಕಕ್ಕೆ ಹೋಗಿದ್ದಾರೆ ಎಂಬ ಭಾವನೆಯೇ ನಂಬಲು ಆಗುತ್ತಿಲ್ಲ ಎಂದು ಹಂಸಲೇಖ ಭಾವುಕರಾದರು.
Advertisement
Advertisement
ನನಗೆ ತೆಲುಗು, ತಮಿಳು ಬೇರೆ ಎಲ್ಲಾ ಭಾಷೆಗಳಲ್ಲೂ ರಾಷ್ಟ್ರ ಪ್ರಶಸ್ತಿ ಬಂದಿದೆ. ಆದರೆ ನನ್ನ ಪ್ರೀತಿಯ ಭಾಷೆ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಸಿಗಲಿಲ್ಲ ಎಂದು ಯಾವಾಗಲೂ ಕೊರಗುತ್ತಿದ್ದರು. ನಮಗೆ ಅದರ ದಾರಿ ಏನು ಎಂಬುದು ಕೂಡ ಗೊತ್ತಿರಲಿಲ್ಲ. ಯೋಗ ಯೋಗ ಎಂಬಂತೆ ಚಿಂದೋಡಿ ಬಂಗಾರೇಶ್ ನಿರ್ದೇಶನದದಲ್ಲಿ ಚಿಂದೋಡಿ ಲೀಲ ಅವರು ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಎಂಬ ಸಿನಿಮಾ ತೆಗೆದರು. ಆ ಸಿನಿಮಾಗೆ ನನ್ನನ್ನು ಸಂಗೀತ ನಿರ್ದೇಶಕನಾಗಿ ಆಯ್ಕೆ ಮಾಡಿದರು. ಹಿಂದೂಸ್ತಾನಿ, ಕರ್ನಾಟಕ ಸಂಗೀತ ಸ್ವಲ್ಪ ಸ್ವಲ್ಪ ಗೊತ್ತಿದ್ದ ನಾನು ಆ ಸಿನಿಮಾಗೆ ಏನು ಮ್ಯೂಸಿಕ್ ಮಾಡಲು ಸಾಧ್ಯ. ನಾನು ಇದಕ್ಕೆ ಯೋಗ್ಯನಲ್ಲ ಎಂದು ಹೇಳಿದೆ. ಆಗ ಅವರು ಅಜ್ಜ ಮಾಡಿಸ್ಕೋತಾನೆ ಸುಮ್ಮನೆ ಹೋಗಿ ಮಾಡಿ ಅಂದರು. ನಾವು ಅಜ್ಜನ ಆಶೀರ್ವಾದಿಂದ ತೋಚಿದ್ದು ಮಾಡಿದ್ವಿ ಎಂದರು.
Advertisement
ಎಸ್ಪಿಬಿ ಅವರಿಗೆ ಹಾಡಿ ಎಂದು ಹೇಳಿದ್ವಿ. ಆಗ ಅವರು ನಿಮ್ಮ ತರ ನಾನು ಕೂಡ ಸ್ವಲ್ಪ ಕಲಿತ್ತಿದ್ದೇನೆ. ಹಿಂದೂಸ್ತಾನಿ ಸಂಗೀತ ನನಗೆ ಏನು ಗೊತ್ತು ಎಂದಿದ್ದರು. ಕೊನೆಗೆ ನೀವೇ ಹಾಡಬೇಕು ಎಂದು ಹಠ ಮಾಡಿದೆವು. ಆದರೆ ಅವರು ಆರು ತಿಂಗಳಾದರೂ ದಿನಾಂಕ ಕೊಟ್ಟಿರಲಿಲ್ಲ. ಬೇರೆಯವರ ಕೈಯಲ್ಲಿ ಹಾಡಿಸಲು ನಾನು ಮುಂದಾದೆ. ಆಗ ಬಂಗಾರೇಶ್ ಅವರು ಎಸ್ಪಿಬಿನೇ ಬೇಕು ಎಂದು ಹೇಳಿದರು. ಕೊನೆಗೆ ಅವರನ್ನು ಹುಡುಗಿಕೊಂಡು ಹೋದೆವು. ಅವರು ಕಾರಿನಲ್ಲಿ ಏರ್ಪೋರ್ಟ್ಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಒಂದು ಕ್ಯಾಸೆಟ್ನಲ್ಲಿ 50 ಲೂಪ್ ರೆಕಾರ್ಡ್ ಮಾಡಿಕೊಂಡ ಅಭ್ಯಾಸ ಮಾಡುತ್ತಿದ್ದರು ಎಂದರು.
ಕೊನೆಗೆ ಬಂದು ಹಾಡಿದರು. ಆದರೆ ನಮ್ಮನ್ನು ಒಳಗೆ ಬಿಟ್ಟಿಲ್ಲ. ನಾನು ಒಬ್ಬನೇ ಹಾಡುತ್ತೇನೆ, ನನಗೆ ತೋಚಿದ್ದು ಹಾಡುತ್ತೇನೆ ಎಂದು ಒಬ್ಬರೇ ಹೋಗಿ ಹಾಡಿದರು. ಬೆಳಗ್ಗೆಯಿಂದ ಸಂಜೆವರೆಗೂ ತಮ್ಮ ತಾಯಿಯನ್ನು ನೆನಪಿಸಿಕೊಂಡು ಹಾಡಿದರು. ಆ ಹಾಡು ಸೀದಾ ಹೃಷಿಕೇಶ್ ಮುಖರ್ಜಿಯ ಪ್ಯಾನಲ್ಗೆ ಹೋಗಿದೆ. ಅಲ್ಲಿ ರೆಹಮಾನ್ ಅವರ ಬಾಂಬೆ ಸಿನಿಮಾ ಮೊದಲ ಸ್ಥಾನದಲ್ಲಿದೆ. ಆಗ ಪಿ.ಬಿ.ಶ್ರೀನಿವಾಸ್ ಅವರು, ಕ್ಲಾಸಿಕಲ್ ಸಂಗೀತವನ್ನು ಕಾಪಾಡಬೇಕು ಎನ್ನುತೀರಿ, ಯಾರೋ ಹಳ್ಳಿಯಿಂದ ಮಾಡಿ ಕಳುಹಿಸಿದ್ದಾರೆ. ಅದಕ್ಕೆ ಗೌರವ ಕೊಡಿ ಎಂದು ವಾದ ಮಾಡಿದರು.
ಅಲ್ಲಿ ಬಾಂಬೆ ಸಿನಿಮಾಗೆ ವೋಟ್ ಜಾಸ್ತಿ ಬೀಳುತ್ತಿತ್ತು. ಕೊನೆಗೆ ಹೃಷಿಕೇಶ್ ಮುಖರ್ಜಿ ಏನು ಇಷ್ಟೊಂದು ಒತ್ತಾಯ ಮಾಡುತ್ತೀರಿ, ಯಾರು ಸಂಗೀತ ನಿರ್ದೇಶಕ, ಯಾರು ಹಾಡಿದ್ದು ಎಂದು ಕೇಳಿದರು. ಆಗ ಹಂಸಲೇಖ ಎಂದಾಗ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿದರು. ಕಡೆಗೂ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಎಸ್ಪಿಬಿ ಖುಷಿ ಪಟ್ಟರು. ಅವರ ಕನಸು ನನಸಾಯಿತು ಎಂದು ಎಸ್ಪಿಬಿ ಜೊತೆಗಿನ ಹಳೆಯ ನೆನಪುಗಳ ಮೆಲುಕು ಹಾಕಿದರು.
ಎಸ್ಪಿಬಿ ಅವರು ಯೂನಿವರ್ಸ್ ಗೆ ಒಬ್ಬರು. ಎಲ್ಲ ಗಾಯಕರಲ್ಲೂ ಪ್ರತಿಭೆ ಇರುತ್ತದೆ. ಆದರೆ ಇವರು ಸುಂದರ ಗಾಯಕರು. ಪ್ರತಿಭೆಯನ್ನು ದೇವರು ಕೊಟ್ಟಿದ್ದು, ಆದರೆ ಜಾಣತನವಾಗಿ ಬುದ್ಧಿ ಖರ್ಚು ಮಾಡಿ ಬದುಕಬೇಕಿದೆ. ಲೌಕಿಕ ಜ್ಞಾನದಿಂದ ನಾನು ಬದುಕಿದ್ದೀನಿ. ನಿಮ್ಮ ವಿನಯ, ವಿಧೇಯತೆಯಿಂದ ಬದುಕಿ ಅನ್ನುತ್ತಿದ್ದರು. ಎಚ್ಚರಿಕೆಯಿಂದ ಬದುಕಿದ್ದರು. ನನ್ನ ಸಿನಿಮಾ ಸಂಗಾತಿ ರವಿಚಂದ್ರನ್, ಸಂಗೀತದ ಸಂಗಾತಿ ಎಸ್ಪಿಬಿ ಎಂದು ಅವರ ಜೊತೆಗಿನ ನಂಟಿನ ಬಗ್ಗೆ ಮೆಲಕು ಹಾಕಿದರು.