ಮುಂಬೈ: ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾ-ಭಾರತದ ಸಂಘರ್ಷದ ಬಳಿಕ ದೇಶದಲ್ಲಿ ಚೀನಾ ವಸ್ತುಗಳು ಹಾಗೂ ಸೇವೆಗಳನ್ನು ಕೈಬಿಡುವಂತೆ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗೆ ಮಹಾ ವಿಕಾಸ್ ಅಘಾಡಿ ನಡೆದ ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0 ಹೂಡಿಕೆದಾರರ ಸಭೆಯಲ್ಲಿ ಚೀನಾದ ಕಂಪನಿಗಳೊಂದಿಗೆ ಸಹಿ ಮಾಡಿತ್ತು. ಆದರೆ ಈಗ ಆ ಮೂರೂ ಒಪ್ಪಂದಗಳನ್ನು ತಡೆಹಿಡಿಯಲಾಗಿದೆ. ಈ ಮೂಲಕ 5,000 ಕೋಟಿ ರೂ. ಮೌಲ್ಯದ ಯೋಜನೆಗೆ ಬ್ರೇಕ್ ಹಾಕಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ, “ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೂರು ಯೋಜನೆಗೆ ಈ ಮೊದಲು ಸಹಿ ಹಾಕಲಾಗಿತ್ತು. ಇಂಡೋ-ಚೀನಾ ಗಡಿಯ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಚೀನಾದ ಕಂಪನಿಗಳೊಂದಿಗೆ ಯಾವುದೇ ಒಪ್ಪಂದಗಳಿಗೆ ಸಹಿ ಹಾಕದಂತೆ ವಿದೇಶಾಂಗ ಸಚಿವಾಲಯವು ಸೂಚಿಸಿದೆ” ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರವು ಕೋವಿಡ್-19 ನಂತರದ ಆರ್ಥಿಕತೆಯನ್ನು ಉತ್ತಮಗೊಳಿಸಲು ‘ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0’ ಪ್ಲಾನ್ ರೂಪಿಸಿತ್ತು. ಇದರ ಅಡಿ ಎಲ್ಲಾ 12 ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಈ ಒಪ್ಪಂದದಲ್ಲಿ ಸಿಂಗಾಪುರ, ದಕ್ಷಿಣ ಕೊರಿಯಾ, ಅಮೆರಿಕದಿಂದ ಹಲವಾರು ಭಾರತೀಯ ಕಂಪನಿಗಳು ಸೇರಿವೆ. ರಾಜ್ಯ ಸರ್ಕಾರವು ಇತರ ಒಂಬತ್ತು ಒಪ್ಪಂದಗಳನ್ನು ಮುಂದುವರಿಸಲಿದೆ ಎಂದು ಸುಭಾಷ್ ದೇಸಾಯಿ ದೇಸಾಯಿ ಹೇಳಿದರು.
ಯಾವ ಯಾವ ಒಪ್ಪಂದ?:
ಕಳೆದ ಸೋಮವಾರ ನಡೆದ ಆನ್‍ಲೈನ್ ಸಮ್ಮೇಳನದಲ್ಲಿ ಚೀನಾದ ರಾಯಭಾರಿ ಸನ್ ವೀಡಾಂಗ್ ಭಾಗವಹಿಸಿದ್ದರು. ಮೂರು ಒಪ್ಪಂದಗಳಲ್ಲಿ ಪುಣೆ ಬಳಿಯ ತಲೆಗಾಂವ್‍ನಲ್ಲಿ ಆಟೋಮೊಬೈಲ್ ಪ್ಲಾಂಟ್ ಸ್ಥಾಪಿಸಲು ಗ್ರೇಟ್ ವಾಲ್ ಮೋಟಾರ್ಸ್ (ಜಿಡಬ್ಲ್ಯೂಎಂ) ನೊಂದಿಗೆ 3,770 ಕೋಟಿ ರೂ. ಯೋಜನೆ, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಫೋಟಾನ್ (ಚೀನಾ) ಹಾಗೂ ಜಂಟಿ ಸಹಭಾಗಿತ್ವದಲ್ಲಿ 1,000 ಕೋಟಿ ರೂ.ಗಳ ಘಟಕ ಸ್ಥಾಪನೆಯ ಒಪ್ಪಂದವಾಗಿತ್ತು. ಈ ಮೂಲಕ 1,500 ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರ ನಿರ್ಧರಿಸಿತ್ತು. ಜೊತೆಗೆ 150 ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಯಾದ ತಲೇಗಾಂವ್‍ನಲ್ಲಿ ಎರಡನೇ ಹಂತದ ವಿಸ್ತರಣೆಯ ಭಾಗವಾಗಿ 250 ಕೋಟಿ ರೂ.ಗಳ ಹೂಡಿಕೆಗಾಗಿ ಹೆಂಗ್ಲಿ ಎಂಜಿನಿಯರಿಂಗ್ ಬದ್ಧವಾಗಿತ್ತು. ಆದರೆ ಈಗ ಯೋಜನೆಯನ್ನು ಅನಿರ್ದಿಷ್ಟಾವಧಿಗೆ ತಡೆ ಹಿಡಿಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕರೆದ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿ, “ಭಾರತಕ್ಕೆ ಶಾಂತಿ ಬೇಕು. ಆದರೆ ಇದರರ್ಥ ನಾವು ದುರ್ಬಲರು ಎಂದಲ್ಲ. ಚೀನಾದ ಸ್ವಭಾವವು ದ್ರೋಹವನ್ನು ಹೊಂದಿದೆ. ಭಾರತವು ಪ್ರಬಲವಾಗಿದೆ, ಅಸಹಾಯಕರಲ್ಲ” ಎಂದು ಹೇಳಿದ್ದರು.
ಪ್ರಧಾನಿ ಮೋದಿ ಅವರಿಗೆ ವಿಶ್ವಾಸ ವ್ಯಕ್ತಪಡಿಸಿದ ಠಾಕ್ರೆ, “ನಮ್ಮ ಸರ್ಕಾರವು ಸೂಕ್ತವಾದ ಉತ್ತರವನ್ನು ನೀಡುವ ಸಾಮಥ್ರ್ಯವನ್ನು ಹೊಂದಿದೆ. ನಾವೆಲ್ಲರೂ ಒಂದಾಗಬೇಕಿದೆ. ದೇಶದ ಪ್ರದೇಶ ರಕ್ಷಣೆ ನಮ್ಮ ಉದ್ದೇಶವಾಗಿರಬೇಕು. ಇದು ಭಾವನೆ ಕೂಡ ಹೌದು. ನಾವು ನಿಮ್ಮೊಂದಿಗೆ ಇದ್ದೇವೆ. ನಮ್ಮ ಸೈನಿಕರು ಹಾಗೂ ಅವರ ಕುಟುಂಬಗಳೊಂದಿಗೆ ನಾವಿದ್ದೇವೆ” ತಿಳಿಸಿದ್ದರು. ಸಭೆಯ ಬಳಿಕ ಮಹಾರಾಷ್ಟ್ರದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.