ಚಿಕ್ಕಮಗಳೂರು: 2036 ಎಕರೆ ನೀರನ್ನು ಮೂರೇ ಬೊಗಸೆಗೆ ಕುಡಿದು ಖಾಲಿ ಮಾಡುತ್ತಾನೆಂದು ಸೃಷ್ಠಿಕರ್ತ ಕೆಂಚರಾಯ ಸ್ವಾಮಿಯನ್ನೇ 500 ವರ್ಷಗಳಿಂದ ಕಬ್ಬಿಣದ ಸರಪಳಿಯಿಂದ ಬಂಧಿಸಿರುವ ಅಪರೂಪದ ನಂಬಿಕೆಗೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ದೇವಾಲಯ ಸಾಕ್ಷಿಯಾಗಿದೆ.
Advertisement
ಸಖರಾಯಪಟ್ಟಣದ ಸರಪಳಿ ಕೆಂಚರಾಯ ಸ್ವಾಮಿ ಅಂದರೆ ಸ್ಥಳೀಯರಿಗೆ ಅಷ್ಟು ಭಯ, ಭಕ್ತಿ. ಪಕ್ಕದ ಏಳು ಗುಡ್ಡಗಳ ಮಧ್ಯದ ಅಯ್ಯನಕೆರೆ ನೀರು ಈ ಕೆಂಚರಾಯ ಸ್ವಾಮಿಗೆ ಒಂದು ಹೊತ್ತಿಗೂ ಸಾಲೋದಿಲ್ಲ. ಮೂರೇ ಬೊಗಸೆಗೆ ಇಡೀ ಕೆರೆ ನೀರನ್ನು ಖಾಲಿ ಮಾಡುತ್ತಾನೆ ಎಂಬುದು ನಂಬಿಕೆ. ಹಾಗಾಗಿ ಇಲ್ಲಿಯ ಜನ ಈ ದೇವರಿಗೆ ಹೆದರಿ ಕಳೆದ 500 ವರ್ಷಗಳಿಂದ ದೇವರ ಮೂರ್ತಿಯನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿದ್ದಾರೆ.
Advertisement
Advertisement
ಸುಮಾರು ಐದು ಶತಮಾನಗಳ ಹಿಂದೆ ಈ ಕೆಂಚರಾಯ ಬಳ್ಳಾರಿಯಿಂದ ಬಂದು ನೆಲೆಯೂರಲು ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಊರೂರು ಸುತ್ತಿ ನೆಲೆಯೂರಲು ದೇವರ ಬಳಿ ಜಾಗ ಕೇಳಿ ಕೊನೆಗೆ ಸಖರಾಯಪಟ್ಟಣದ ಸಗನಿ ರಂಗನಾಥ ಸ್ವಾಮಿ ಬಳಿ ಬಂದಿದ್ದನಂತೆ. ಆಗ ರಂಗನಾಥ ಸ್ವಾಮಿ ನನಗೆ ಏನು ಕೊಡುತ್ತೀಯಾ ಎಂದು ಕೇಳಿದ್ದಕ್ಕೆ ನೀನು ಏನು ಕೇಳಿದರು ಕೊಡುತ್ತೇನೆ ಎಂದಿದ್ದನಂತೆ ಕೆಂಚರಾಯ. ಆಗ ರಂಗನಾಥ ಸ್ವಾಮಿ ದಾರಿಯಲ್ಲಿ ಹೋಗುತ್ತಿದ್ದ ಆನೆ ಕೊರಳಲ್ಲಿದ್ದ ಗಂಟೆ ಬೇಕು ಎಂದಿದ್ದನಂತೆ. ಗಂಟೆ ತಂದು ಕೊಟ್ಟರೆ ಅಡಿಕೆ ಮರದ ಉದ್ದ ಮುದ್ದೆ. ತೆಂಗಿನ ಮರದ ಉದ್ದ ಅನ್ನ, ತಾಳೆ ಮರದ ಉದ್ದ ಮಾಂಸ, ಬಾಳೆ ಮರದ ಉದ್ದ ಹೆಂಡ ಕೊಡುತ್ತೇನೆ ಎಂದಿದ್ದನಂತೆ. ಆದರೆ ಆನೆ ಕೊರಳಲ್ಲಿದ್ದ ಗಂಟೆ ತಂದು ಕೊಟ್ಟರೂ ರಂಗನಾಥ ಸ್ವಾಮಿ ಹೇಳಿದ್ದನ್ನು ಕೊಡಲಿಲ್ಲ. ಅದಕ್ಕೆ ಪಕ್ಕದಲ್ಲಿ ತುಂಬಿದ್ದ ಕೆರೆ ನೀರನ್ನು ಮೂರೇ ಬೊಗಸೆಗೆ ಕುಡಿದು ಖಾಲಿ ಮಾಡಿದ್ದನಂತೆ. ಆಗ ದನಕರು-ಹೊಲಗದ್ದೆ-ಜನರಿಗೆ ನೀರಿನ ಅಭಾವ ಎದುರಾಗಿತ್ತು. ಅದಕ್ಕಾಗಿ ಅಂದಿನಿಂದ ಇಂದಿನವರೆಗೂ ದೇವರನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿದ್ದಾರೆ ಎಂಬುದು ಪ್ರತೀತಿ.
Advertisement
ರಂಗನಾಥ ಸ್ವಾಮಿಯೂ ದಿನಕ್ಕೆ ಮೂರು ಬಾರಿ ಸ್ನಾನ ಮಾಡುತ್ತಾನೆ. ಆತನ ಸ್ನಾನ, ಪೂಜೆಗೂ ಇದೇ ನೀರು ಬೇಕು. ಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದರಿಂದ ರಂಗನಾಥ ಸ್ವಾಮಿ ಪೂಜೆಗೂ ನೀರು ಇಲ್ಲದಂತಾಯ್ತು. ಆಗ ರಂಗನಾಥ ಸ್ವಾಮಿಯೇ ಈ ಕೆಂಚರಾಯನನ್ನ ಹೀಗೆ ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿದ್ದಾನೆ ಅನ್ನೋದು ಸ್ಥಳೀಯರ ನಂಬಿಕೆ. ಅದಕ್ಕಾಗಿ ಇಲ್ಲಿನ ಜನ ಕಳೆದ ಐನೂರು ವರ್ಷಗಳಿಂದ ದೇವರನ್ನು ಬಂಧಿಸಿದ್ದು, ಒಂದು ವೇಳೆ ದೇವರನ್ನು ಬಂಧನದಿಂದ ಮುಕ್ತ ಮಾಡಿದರೆ ಅಯ್ಯನಕೆರೆ ನೀರು ಒಂದೇ ದಿನದಲ್ಲಿ ಖಾಲಿಯಾಗುತ್ತದೆ ಎನ್ನುವುದು ಗ್ರಾಮಸ್ಥರ ಭಯವಾಗಿದೆ.
ದಿನಂ ಪ್ರತಿ ರಂಗನಾಥ ಸ್ವಾಮಿಯನ್ನು ನೋಡಲು ಬರುವ ಭಕ್ತರು ರಂಗನಾಥ ಸ್ವಾಮಿಗೆ ಪೂಜೆ ಮಾಡಿಸಿ ಹಣ್ಣು-ತುಪ್ಪ ನೈವೆದ್ಯ ಮಾಡಿದರೆ, ಕೆಂಚರಾಯನಿಗೆ ಕುರಿ, ಕೋಳಿಯನ್ನು ಬಲಿಕೊಟ್ಟು ಹೊಟ್ಟೆ ತುಂಬಿಸುತ್ತಿದ್ದಾರೆ. ದೇವರ ಮೈಮೇಲಿನ ಕಬ್ಬಿಣದ ಸರಪಳಿಯನ್ನು ಕಳೆದ ಐನೂರು ವರ್ಷಗಳಿಂದ ಒಮ್ಮೆಯೂ ತೆಗೆದಿಲ್ಲವಂತೆ. ಈ ಕೆಂಚರಾಯ ಸ್ವಾಮಿ ಬರೀ ಊಟಕ್ಕೆ ಮಾತ್ರ ಹೆಸರಾಗಿಲ್ಲ. ಮಕ್ಕಳಾಗದವರು ರಂಗನಾಥ ಸ್ವಾಮಿ ಗುಡ್ಡಕ್ಕೆ ಹೋಗಿ ಪೂಜೆ ಮಾಡಿ ಬಂದರೆ ಮಕ್ಕಳಾಗುತ್ತದೆ ಎನ್ನುವ ನಂಬಿಕೆಯೂ ಸ್ಥಳೀಯರಲ್ಲಿ ಅಚಲವಾಗಿದೆ.