– ಆಡಳಿತಾತ್ಮಕ ನಿರ್ಧಾರ ಕೈಗೊಳ್ಳದಂತೆ ವಿ.ಆರ್.ವಾಲಾ ಆದೇಶ
ಬೆಂಗಳೂರು: ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿದ್ದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ರೈತ ಮೋರ್ಚಾ ಸಂಘಟನೆಯ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಸೋಮವಾರ ಸುಮಾರು 800 ಜನ ಎಂಜಿನಿಯರ್ ಗಳಿಗೆ ಬಡ್ತಿ ಹಾಗೂ ವರ್ಗಾವಣೆ ಮಾಡಿದ್ದು, ಇದಕ್ಕಾಗಿ 500 ಕೋಟಿ ರೂ. ಹಣ ಪಡೆದಿದ್ದಾರೆ. ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಸಮುದಾಯದ ಎಂಜಿನಿಯರ್ ಗಳು ವರ್ಗಾವಣೆ ಮಾಡಿಸಿಕೊಳ್ಳಲು ಒಂದು ವರ್ಷದಿಂದ ಕಾಯುತ್ತಿದ್ದರು. ಇಂತಹ ಸಮಯದಲ್ಲಿ ಹಣ ಪಡೆದು ಏಕಾಏಕಿ ಮನಬಂದಂತೆ ಎಂಜಿನಿಯರ್‍ಗಳನ್ನು ವರ್ಗಾವಣೆ ಮಾಡಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ, ಸರ್ಕಾರ ಮಾಡಿರುವ ವರ್ಗಾವಣೆಯನ್ನು ಹಿಂಪಡೆಯಬೇಕು ಎಂದು ರಾಜ್ಯಪಾಲರಿಗೆ ಲಿಂಗಮೂರ್ತಿ ದೂರು ನೀಡಿದ್ದಾರೆ.
Advertisement
Advertisement
ರಾಜ್ಯಪಾಲರ ಚಾಟಿ: ಸಮ್ಮಿಶ್ರ ಸರ್ಕಾರ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಅಲ್ಪ ಮತಕ್ಕೆ ಕುಸಿದ ಪರಿಣಾಮ ಕ್ಯಾಬಿನೆಟ್ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಸರ್ಕಾರ ಪತನದ ಮುನ್ಸೂಚನೆ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ಕಡತಗಳಿಗೆ ಸಹಿ ಮತ್ತು ಅಧಿಕಾರಿಗಳಿಗೆ ಭಡ್ತಿ ನೀಡಲಾಗುತ್ತಿದೆ ಎಂದು ಈ ಹಿಂದೆ ಬಿಜೆಪಿ ಸಹ ಬಿಜೆಪಿ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ಈ ಸೂಚನೆ ಹೊರಡಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಸಚಿವ ಹೆಚ್.ಡಿ.ರೇವಣ್ಣ ಇಲಾಖೆಯಲ್ಲಿ ಬುಧವಾರ ಒಂದೇ ದಿನದಲ್ಲಿ 800 ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿತ್ತು.
ಸೋಮವಾರ ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ, ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದರು. ಮೈತ್ರಿ ಉಳಿಸಿಕೊಳ್ಳಲು ಎರಡೂ ಪಕ್ಷದ ಮುಖಂಡರು ಓಡಾಡುತ್ತಿದ್ದರೆ, ರೇವಣ್ಣ ಅವರು ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿತ್ತು.
ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಅಧಿಕಾರಿಗಳಿಗೆ ಬಡ್ತಿ ನೀಡಿರುವುದರ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿತ್ತು.
ಈ ಹಿಂದೆ ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದರು. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದ್ದವು.