ಕೊಪ್ಪಳ: ತುಂಗಭದ್ರಾ ಡ್ಯಾಂ ನಿಂದ ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಲಾಗಿದ್ದು, ಕೊಪ್ಪಳ ತಾಲೂಕಿನ ಶಿವಪುರ ಮಾರ್ಕಂಡೇಶ್ವರ ಬಳಿ ಇರುವ ನಡುಗಡ್ಡೆಯಲ್ಲಿ ಜಾನುವಾರುಗಳು ಸಿಲುಕಿಹಾಕಿಕೊಂಡಿವೆ. ಹೀಗಾಗಿ ಅವುಗಳನ್ನು ಸುರಕ್ಷಿತ ಜಾಗಕ್ಕೆ ತಲುಪಿಸಲು ದನಗಾಯಿ ವೀಡಿಯೋ ಮೂಲಕ ಕೊಪ್ಪಳ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಶಿವಪುರ ಬಳಿ ಇರುವ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂಕಪ್ರಾಣಿಗಳು ಮಳೆ ಚಳಿಗೆ ರೋಧಿಸುತ್ತಿವೆ. ಸುಮಾರು 500 ದನಕರುಗಳು ಕಳೆದ 4 ದಿನದಿಂದ ಆಹಾರವಿಲ್ಲದೆ ನಡುಗಡ್ಡೆಯಲ್ಲಿ ನಿತ್ರಾಣಗೊಂಡಿವೆ. ನದಿ ದಾಟಲು ಆಗದೇ ನಡುಗಡ್ಡೆಯಲ್ಲಿ ಸಿಲುಕಿರುವ ದನಕರುಗಳು ಮೇವು ಇಲ್ಲದೆ ನಿತ್ರಾಣವಾಗಿದ್ದು, ಔಷಧಿ ಪೂರೈಸುವಂತೆ ದನಗಾಯಿಗರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಂದ್ರೆ ಭಾರತೀಯ ಜೂಟಾ ಪಾರ್ಟಿ: ಈಶ್ವರ್ ಖಂಡ್ರೆ
ದನಗಾಯಿಗರು ಶೆಡ್ ಇಲ್ಲದೆ, ಮೂಕ ಪ್ರಾಣಿಗಳನ್ನು ಕಾಯುತ್ತಿದ್ದಾರೆ. ದನಕರುಗಳ ರೋಧನೆ ಕಂಡು ದನಗಾಯಿ ಮಂಜುನಾಥ್ ಕಣ್ಣೀರು ಹಾಕುತ್ತಿದ್ದಾರೆ. ಮೇವು ಸಿಗದೇ ಈಗಾಗಲೇ ಎರಡು ಕರು ಮೃತಪಟ್ಟಿದ್ದು, ದನಕರುಗಳ ಚಿಕಿತ್ಸೆಗೆ ಪಶು ವೈದ್ಯರ ಅವಶ್ಯಕತೆ ಇದೆ. ಕೂಡಲೇ ಏನಾದ್ರೂ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ದನಗಾಯಿಗಳು ಮನವಿ ಮಾಡಿದ್ದಾರೆ.