ಮಂಡ್ಯ: ರಸ್ತೆಯಲ್ಲಿ ನಿಂತಿದ್ದ ಯುವಕ 500 ರೂಪಾಯಿ ಕೊಡಲಿಲ್ಲ ಎಂದು ಆತನ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ತಿವಿದು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿ ಜರುಗಿದೆ.
ಮಧು ಕೊಲೆಯಾದ ಯುವಕ. ದಳವಾಯಿಕೋಡಿಹಳ್ಳಿ ಗ್ರಾಮದ ಬಳಿ ಮಾರ್ಚ್ 31ರಂದು ಮಧುಗೆ ಅಪರಿಚಿತರು ಚಾಕುವಿನಿಂದ ತಿವಿದು ಪರಾರಿಯಾಗಿದ್ದರು. ಈ ವೇಳೆ ಮಧುವನ್ನು ಆಸ್ಪತ್ರೆಗೆ ದಾಖಲು ಮಾಡಲು ಹೋದ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದ. ಈ ಕುರಿತು ಹಲಗೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳಿಗೆ ಬಲೆ ಬೀಸಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಮಂದಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಪ್ರಕರಣದ ಹಿನ್ನೆಲೆ:
ಮಾರ್ಚ್ 31 ರಂದು ಮಧು ಗುಂಡಾಪುರ ಜಾತ್ರಗೆ ಹೋಗಲು ತನ್ನ ಸ್ನೇಹಿತನೊಂದಿಗೆ ದಳವಾಯಿಕೋಡಿಹಳ್ಳಿ ಗೇಟ್ ಬಳಿ ನಿಂತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ಕಾಂತ ಮತ್ತು ನಂದೀಶ್ 500 ರೂಪಾಯಿ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಮಧು ಮತ್ತು ಆತನ ಸ್ನೇಹಿತ ಯಾಕೆ ಕೊಡಬೇಕು ಎಂದು ಮಾತಿಗೆ ಮಾತು ಬೆಳೆಸುತ್ತಾರೆ. ಈ ವೇಳೆ ಕಾಂತ ಮತ್ತು ನಂದೀಶ ಇಬ್ಬರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಬಳಿಕ ತನ್ನ ಸ್ನೇಹಿತರಾದ ಪ್ರಮೋದ್, ಮುತ್ತುರಾಜು, ಸಾಗರ್ ಎಂಬುವವರನ್ನು ಕರೆಯುತ್ತಾರೆ. ಈ ವೇಳೆ ಪ್ರಮೋದ್ ಚಾಕುವಿನಿಂದ ಮಧುವಿನ ಹೊಟ್ಟೆಯ ಭಾಗಗಕ್ಕೆ ತಿವಿದು, ಮಧು ಮೈ ಮೇಲೆ ಇದ್ದ ಚಿನ್ನಾಭರಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಇದಾದ ನಂತರ ಈ ಐದು ಮಂದಿಯ ಪೈಕಿ ನಾಲ್ಕು ಮಂದಿ ನ್ಯಾಯಾಲಯಕ್ಕೆ ಶರಣಾಗಿದ್ದು ಮತ್ತೋರ್ವನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಪಿಯಾದ ಪ್ರಮೋದ್ ಮೇಲೆ ಒಂದು ಕೊಲೆ ಪ್ರಕರಣ ಸೇರಿ ಐದು ಪ್ರಕರಣಗಳಿವೆ. ರಾಜು ಮೇಲೆ ಒಂದು ಕೊಲೆ ಸೇರಿ ನಾಲ್ಕು ಕೇಸ್‍ಗಳು ಈಗಾಗಲೇ ಇವೆ.