500ರೂ. ಪಿಂಚಣಿ ಹಣಕ್ಕಾಗಿ ವೃದ್ಧ ತಾಯಿಯನ್ನ ಮಂಚದ ಸಮೇತ ಬ್ಯಾಂಕಿಗೆ ಕರೆತಂದ ಮಗಳು

Public TV
2 Min Read
ODISHA

– ವಿಡಿಯೋ ವೈರಲ್

ಭುವನೇಶ್ವರ್: ಪಿಂಚಣಿ ಹಣ ಪಡೆಯಲು ವೃದ್ಧರು ಎಷ್ಟೆಲ್ಲ ಕಷ್ಟಪಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೆಯೇ ಒಡಿಶಾದಲ್ಲಿ ಕೂಡ ತಾಯಿಯ ಪಿಂಚಣಿ ಹಣಕ್ಕಾಗಿ ಮಗಳೊಬ್ಬಳು ಕಷ್ಟಪಟ್ಟ ಮನಕಲಕುವ ಘಟನೆ ನಡೆದಿದೆ.

ಹೌದು. ತನ್ನ 100 ವರ್ಷ ವಯಸ್ಸಿನ ವೃದ್ಧ ತಾಯಿಯ ಪಿಂಚಣಿ ಹಣಕ್ಕಾಗಿ ಮಗಳು ಮಂಚದ ಸಮೇತ ಆಕೆಯನ್ನು ಬ್ಯಾಂಕಿಗೆ ಕರೆತಂದ ಘಟನೆಯೊಂದು ನಡೆದಿದೆ. ಮಗಳು ತನ್ನ ತಾಯಿಯನ್ನು ಮಂಚದ ಸಮೇತ ಕರೆದೊಯ್ಯುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ODISHA 3

27 ನಿಮಿಷದ ವಿಡಿಯೋದಲ್ಲಿ 60 ವರ್ಷದ ಮಹಿಳೆ ಬಾರ್ಗಾಂವ್ ಗ್ರಾಮದಲ್ಲಿ ತನ್ನ ವೃದ್ಧ ತಾಯಿಯನ್ನು ಮಂಚದ ಮೇಲೆ ಮಲಗಿಸಿಕೊಂಡು ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಹೀಗೆ ತನ್ನ ತಾಯಿಯನ್ನು ಮಗಳು ಕರೆದುಕೊಂಡು ಹೋಗುತ್ತಿರುವುದು ಉತ್ಕಲ್‍ನ ಗ್ರಾಮೀಣ ಬ್ಯಾಂಕಿಗೆ.

ಪಿಂಚಣಿ ಹಣವನ್ನು ಡ್ರಾ ಮಾಡಲು ಆಕೆಯೇ ಬರಬೇಕು ಎಂದು ಬ್ಯಾಂಕ್ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಆದರೆ ತಾಯಿಗೆ ಎದ್ದು ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಬ್ಯಾಂಕಿಗೆ ಬರಲು ಆಗುತ್ತಿಲ್ಲ ಎಂದು ಹೇಳಿದರೂ ಸಿಬ್ಬಂದಿ ಕೇಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ವೃದ್ಧೆಯ ಮಗಳು ಗುಂಜ ದೇವಿ ಬೇರೆ ದಾರಿಯಿಲ್ಲದೆ ಈ ರೀತಿಯಾಗಿ ಬ್ಯಾಂಕಿಗೆ ಕರೆತಂದಿದ್ದಾರೆ.

ODISHA 2

ಜೂನ್ 10 ರಂದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಗುಂಜ, ನನ್ನ ತಾಯಿಯ ಹಣವನ್ನು ಡ್ರಾ ಮಾಡಿಕೊಳ್ಳಲು ನನಗೆ ಅವಕಾಶ ನೀಡಿ ಎಂದು ಬ್ಯಾಂಕ್ ಮ್ಯಾನೇಜರ್ ಅವರನ್ನು ಪರಿಪರಿಯಾಗಿ ಬೇಡಿಕೊಂಡೆ. ಯಾಕೆಂದರೆ ಆಕೆಗೆ ಎದ್ದು ನಡೆಯಲು ಆಗುತ್ತಿಲ್ಲ. ಹೀಗಾಗಿ ಆಕೆ ಬ್ಯಾಂಕಿಗೆ ಬಂದು ಹಣ ಡ್ರಾ ಮಾಡಲು ಸಾಧ್ಯವಿಲ್ಲ. ಸದ್ಯ ನಮಗೆ ಹಣದ ಅವಶ್ಯಕತೆ ಇದೆ. ಹೀಗಾಗಿ ದಯಮಾಡಿ ಹಣ ಡ್ರಾ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡೆ. ಆದರೆ ಬ್ಯಾಂಕ್ ಮ್ಯಾನೇಜರ್ ಇದಕ್ಕೆ ಸುತರಾಂ ಒಪ್ಪಲಿಲ್ಲ. ಬದಲಾಗಿ ಭೌತಿಕ ಪರಿಶೀಲನೆ ನಡೆಸಬೇಕು. ಹೀಗಾಗಿ ಅಗತ್ಯವಾಗಿ ನೀವು ಅವರನ್ನು ಕರೆದುಕೊಂಡು ಬರಲೇಬೇಕು ಎಂದರು. ಆಗ ನಾನು ಹಾಗಾದರೆ ನೀವೇ ಮನೆಗೆ ಬಂದು ಹಣ ನೀಡಿ ಎಂದು ಹೇಳಿದೆ. ಅಲ್ಲದೆ ಅವರು ಮನೆಗೆ ಬರುತ್ತಾರೆ ಎಂದು ಕಾದು ಕುಳಿತೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ಯಾಂಕಿನಿಂದ ಯಾರೊಬ್ಬರೂ ಬಾರದ ನಂತರ ಮತ್ತೆ ಜೂನ್ 8ರಂದು ಬ್ಯಾಂಕಿಗೆ ತೆರಳಿದೆ. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಅಜಿತ್ ಕುಮಾರ್ ಜೊತೆ ಹಣ ನೀಡುವಂತೆ ವಾಗ್ವಾದಕ್ಕಿಳಿದೆ. ಆ ಬಳಿಕ ಮ್ಯಾನೇಜರ್, ನಾಳೆ ನಮ್ಮ ಸಿಬ್ಬಂದಿ ನಿಮ್ಮ ಮನೆಗೆ ಬರುತ್ತಾರೆ ಎಂದು ಹೇಳಿ ಕಳುಹಿಸಿದರು ಎಂದು ಗುಂಜ ನಡೆದ ಘಟನೆಯನ್ನು ವಿವರಿಸಿದರು.

ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಪ್ರತಿಕ್ರಿಯಿಸಿ, ನಾನು ಗುಂಜಳ ಬಳಿ ನಾಳೆ ನಮ್ಮ ಸಿಬ್ಬಂದಿ ನಿಮ್ಮ ಮನೆಗೆ ಬರುತ್ತಾರೆ ಎಂದು ಹೇಳಿ ಕಳುಹಿಸಿದ್ದೆ. ಆದರೆ ಬಿಡುವಿಲ್ಲದಷ್ಟು ಕೆಲಸವಿದ್ದಿದ್ದರಿಂದ ಹೋಗಲು ಅಸಾಧ್ಯವಾಯಿತು. ಹೀಗಾಗಿ ಮರುದಿನ ಆಕೆ ಬ್ಯಾಂಕ್ ಓಪನ್ ಆಗುವ ಮೊದಲೇ ತನ್ನ ತಾಯಿಯನ್ನು ಈ ರೀತಿಯಾಗಿ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *