ಬಂಗಾರದ ಮನುಷ್ಯ ಚಿತ್ರಕ್ಕೆ 50 ವರ್ಷ : ಸಿನಿಮಾ ಆಗಿದ್ದು ಹೇಗೆ? ಕುತೂಹಲದ ಟಿಪ್ಪಣಿ

Public TV
5 Min Read
bangarada manushya 6

ಡಾ.ರಾಜ್ ಕುಮಾರ್ ಅಭಿನಯದ, ಸಿದ್ಧಲಿಂಗಯ್ಯ ನಿರ್ದೇಶನದ ‘ಬಂಗಾರದ ಮನುಷ್ಯ’ ಸಿನಿಮಾ ಬಿಡುಗಡೆ ಆಗಿದ್ದು 31.03. 1972ರಲ್ಲಿ. ಆ ಸಿನಿಮಾ ರಿಲೀಸ್ ಆಗಿ ಇಂದಿಗೆ 50 ವರ್ಷಗಳು ತುಂಬಿವೆ. ಈ ನೆಪದಲ್ಲಿ ಹಿರಿಯ ಪತ್ರಕರ್ತ ಮಹೇಶ್ ದೇವಶೆಟ್ಟಿ ಅವರು ಬರೆದ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಪುಸ್ತಕದ ಆಯ್ದ ಭಾಗ ಇಲ್ಲಿದೆ.

bangarada manushya 2

ಕೆಲವರು ಮುಖ ಸ್ತುತಿಗೆ ಮತ್ತು ಗೌಡರನ್ನು ಓಲೈಸಲು ಎದುರಿಗೆ ಸಿನಿಮಾ ಚೆನ್ನಾಗಿದೆ ಎಂದು ಹೇಳಿದರು. ವರದಪ್ಪ ಹೆಚ್ಚು ಮಾತಾಡುತ್ತಿರಲಿಲ್ಲ. ‘ಚೆನ್ನಾಗಿದೆ…ಚೆನ್ನಾಗಿದೆ…’ ಎಂದು ಮಾತು ಮುಗಿಸಿದರು. ಆದರೆ ಯಾವಾಗ ರಾಜ್ ಕೂಡ ಇದು ಐದಾರು ವಾರದ ಸಿನಿಮಾ ಎಂದು ಹೇಳಿದರೋ ಗೌಡರಿಗೆ ನಿಜಕ್ಕೂ ಗೊಂದಲ ಮತ್ತು ಆತಂಕ ಶುರುವಾಯಿತು. ರಾಜ್ ಹಾಗೆ ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಅದಕ್ಕೆ ಕಾರಣ ಇಲ್ಲಿದೆ ಕೇಳಿ. ಅಲ್ಲಿವರೆಗೆ ರಾಜ್ ನಟಿಸಿದ್ದ ಚಿತ್ರಗಳಾದರೂ ಎಂಥದ್ದೆಂದು ನೀವೇ ನೋಡಿ. ಕಿಲಾಡಿ ರಂಗ, ಭೂಪತಿ ರಂಗ, ಭಲೇ ಹುಚ್ಚ, ಭಲೇ ಜೋಡಿ, ಎಮ್ಮೆ ತಮ್ಮಣ್ಣ , ಬೀದಿ ಬಸವಣ್ಣ, ಗೋವಾದಲ್ಲಿ ಸಿಐಡಿ 999…ಇದರಲ್ಲಿ ಎಂಥಾ ಕಿಕ್ ಇದೆ ಎಂದು ನಿಮಗೇ ಗೊತ್ತಾಗುತ್ತದೆ. ಅದರಲ್ಲೂ ಆ ಚಿತ್ರಗಳಲ್ಲಿ ರಾಜ್ ಸಕತ್ತಾಗಿ ಫೈಟ್ ಮಾಡಿ ವಿಲನ್‌ಗಳನ್ನು ಉರುಳಿಸುತ್ತಿದ್ದರು. ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಚಗುಳಿ ಇಡುತ್ತಿದ್ದರು, ನಾಯಕಿಗೆ ತರಲೆ ಮಾಡುವ ಮೂಲಕ ನಗಿಸುತ್ತಿದ್ದರು, ‘ ಭೂಪತಿ ರಂಗ ನಾನು…’ ಎಂದು ಹಾಡುತ್ತಾ ಬಂದರೆ ಸಾಕು ಜನರು ಎದ್ದು ನಿಂತು ಕೇಕೆ ಹಾಕುತ್ತಿದ್ದರು. ಆದರೆ ಬಂಗಾರದ ಮನುಷ್ಯದಲ್ಲಿ ಇಂಥದ್ದು ಏನೂ ಇರಲಿಲ್ಲ. ಗಂಭೀರವಾದ ರಾಜೀವಪ್ಪನ ಪಾತ್ರದಲ್ಲಿ ಹೆಚ್ಚು ಕಾಮಿಡಿ ತುರುಕಲು ಆಗುತ್ತಿರಲಿಲ್ಲ. ನಾಯಕಿಯೊಂದಿಗಿನ ರೊಮ್ಯಾನ್ಸ್ ದೃಶ್ಯಗಳೂ ಸರಳವಾಗಿದ್ದವು. ಕಲರ್ ಫುಲ್ ಡ್ರೆಸ್‌ನಲ್ಲಿ ರಾಜ್ ಮಿಂಚುತ್ತಾರೆಂದರೆ ಅದೂ ಇಲ್ಲ. ಹೆಚ್ಚು ಕಮ್ಮಿ ಲುಂಗಿ, ಪಂಚೆ, ಅಂಗಿಯಲ್ಲಿ ಕಾಣಿಸಿಕೊಂಡಿದ್ದರು. ಇದ್ದದ್ದು ಒಂದು ಗದ್ದೆ ಫೈಟು, ಇನ್ನು ಕತೆಯ ವಿಷಯಕ್ಕೆ ಬಂದರೆ ಅದೂ ಅಲ್ಲಿವರೆಗೆ ರಾಜ್ ಮಾಡಿದ ಚಿತ್ರಗಳ ಮಾದರಿಯಲ್ಲಿ ಇರಲಿಲ್ಲ. ಅಕ್ಕನ ಮಕ್ಕಳನ್ನು ಓದಿಸಲು, ಅದೇ ಊರಿನಲ್ಲಿ ನೆಲೆ ನಿಂತು, ಸಾಲ ಮಾಡಿ ತೋಟ ಮಾಡುತ್ತಾರೆ. ಕಲ್ಲು ಬಂಡೆಗಳನ್ನು ಕೊರೆದು ಅದೇ ಮಣ್ಣಲ್ಲಿ ಹಸಿರು ಬೆಳೆಯುತ್ತಾರೆ. ದಿನದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತಾರೆ. ಅಕ್ಕನ ಮಕ್ಕಳ ಸಹಿತ ಅವರ ಗೆಳೆಯನನ್ನು ಓದಿಸುತ್ತಾರೆ. ಇನ್ನೊಂದು ಕಡೆ ಅಕ್ಕನ ಗಂಡನಿಗೆ ಇದ್ದ ಇನ್ನೊಂದು ಸಂಬಂಧವನ್ನು ಗುಟ್ಟಾಗಿ ಕಾಪಾಡಿಕೊಂಡು ಬರುತ್ತಾ, ಆರತಿ ಮತ್ತು ಆಕೆಯ ಮಗನಿಗೂ ಹಣದ ಸಹಾಯ ಮಾಡುತ್ತಾರೆ. ಮೊದಲು ಅಕ್ಕನ ಮಕ್ಕಳ ಮದುವೆಯಾಗಲಿ ಆಮೇಲೆ ನನ್ನದು ಎಂದು ಅಲ್ಲಿಯೂ ತ್ಯಾಗವನ್ನು ಮೆರೆಯುತ್ತಾರೆ. ಮದುವೆಯ ಸುಖ ಅನುಭವಿಸುವ ಮುಂಚೆಯೇ ನಾಯಕಿ ಭಾರತಿ ಅಕಸ್ಮಿಕವಾಗಿ ಬಾವಿಗೆ ಬಿದ್ದು ಸಾಯುತ್ತಾರೆ. ಅದೇ ನೋವಿನಲ್ಲಿ ಇರುವಾಗ, ವಜ್ರಮುನಿ , ರಾಜ್‌ಗೆ ಇನ್ನೊಂದು ಅನೈತಿಕ ಸಂಬಂಧ ಇದೆ ಎಂದು ಅನುಮಾನ ಪಡುತ್ತಾರೆ. ವಜ್ರಮುನಿ ಎಂಥಾ ಒಳ್ಳೆಯ ಪಾತ್ರವನ್ನು ಮಾಡಿದರೂ ಕೊನೇ ಗಳಿಗೆಯಲ್ಲಿ ವಿಲನ್ ಆಗಲೇಬೇಕಿತ್ತಲ್ಲ….!

bangarada manushya 1

‘ನಿನ್ನ ತಮ್ಮನಿಗೆ ಇನ್ನೊಂದು ಸಂಬಂಧ ಇದೆ. ಆತನ ಒಳ್ಳೆತನ ಬೆಳಗಾವಿಯಲ್ಲಿ ಹೊಳೆಯುತ್ತಿದೆ…’ ಎನ್ನುತ್ತಾನೆ. ಅಷ್ಟೇ ಅಲ್ಲ, ನಮ್ಮ ಪಾಲು ಕೊಡು ಎನ್ನುತ್ತಾನೆ. ರಾಜ್ ಕೊಡುವುದಿಲ್ಲ ಎಂದಾಗ, ತಿನ್ನೋದು ನಮ್ಮ ಅನ್ನ , ಉಡೋದು ನಮ್ಮ ಬಟ್ಟೆ…’ ಎಂದು ಹೇಳಿಯೇ ಬಿಡುತ್ತಾನೆ. ಇನ್ನೇನು ಊಟದ ತಟ್ಟೆ ಮುಂದೆ ಕೂತ ರಾಜ್ ತುತ್ತನ್ನು ಬಾಯಿಗೆ ಇಡಬೇಕೆನ್ನಷ್ಟರಲ್ಲಿ ವಜ್ರಮುನಿ ಮಾತು ಎದೆಗೆ ತಿವಿಯುತ್ತದೆ. ತಟ್ಟೆಗೆ ನಮಸ್ಕಾರ ಮಾಡಿ, ಚಪ್ಪಲಿಯನ್ನೂ ಹಾಕಿಕೊಳ್ಳದೆ ರಾಜ್ ಮನೆಯಿಂದ ಹೊರಡುತ್ತಾರೆ. ತೋಟಕ್ಕೆ ಬಂದು ಮಣ್ಣನ್ನು ಕೈಗೆತ್ತಿಕೊಂಡು, ಕಣ್ಣಿಗೆ ಒತ್ತಿಕೊಂಡು ಹೇಳುತ್ತಾರೆ. ‘ ನೀನು ನಂಬಿದವರಿಗೆ ಎಂದೆಂದೂ ಕೈ ಬಿಡುವುದಿಲ್ಲ…ನನ್ನನ್ನು ಕಾಪಾಡಿದಂತೆ, ನಮ್ಮ ಅಕ್ಕ ಮತ್ತು ಮಕ್ಕಳನ್ನು ಕಾಪಾಡು ತಾಯೇ…’ ಎಂದು ಕೈ ಮುಗಿಯುತ್ತಾರೆ. ಮೈಮೇಲಿದ್ದ ಶಾಲ್ ಅನ್ನು ಗಿಡದ ಕೆಳಗೆ ಚಳಿಯಿಂದ ಮಲಗಿದ್ದ ಮುದುಕನಿಗೆ ಹೊದ್ದಿಸಿ….ಸೂರ್ಯಾಸ್ತ ಗುಂಟ ಒಂಟಿ…ಒಂಟಿಯಾಗಿ ಬಹು ದೂರ ದೂರ… ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

bangarada manushya 3

ಉಫ್…ರಾಜ್ ಈ ಹಿಂದೆ ಮಾಡಿದ ಮಾಸ್ ಎಲಿಮೆಂಟ್‌ಗಳೇ ಇಲ್ಲದ ಈ ಚಿತ್ರವನ್ನು ಜನರು ಒಪ್ಪುತ್ತಾರಾ ? ಹೀಗಾಗಿಯೇ ಎಲ್ಲರಿಗೂ ಇದು ಅನ್ನಿಸಿತ್ತು. ಕ್ಲೈಮ್ಯಾಕ್ಸ್ ಚೇಂಜ್ ಮಾಡಿದರೆ ಜನ ನೋಡಬಹುದು. ಇದಕ್ಕೆ ಸಿದ್ದಲಿಂಗಯ್ಯ ಬಿಲ್ ಕುಲ್ ಒಪ್ಪಲಿಲ್ಲ. ಚಿತ್ರ ಕತೆ ಮಾಡಿದ್ದು ನಾನು, ಜನರಿಗೆ ಇದರ ಮೂಲಕ ಹೊಸ ಸಂದೇಶವನ್ನೂ ಕೊಟ್ಟಿದ್ದೇನೆ. ಎಲ್ಲರನ್ನೂ ಹೊಡೆದು ಮತ್ತೆ ಅದೇ ಮನೆಯಲ್ಲಿ ರಾಜ್ ಇದ್ದರೆ ಇಡೀ ಪಾತ್ರವೇ ಬಿದ್ದು ಹೋಗುತ್ತದೆ. ನಾನಂತೂ ಏನೂ ಮಾಡಲ್ಲ. ಬೇಕಾದರೆ ಇನ್ನೊಬ್ಬರಿಂದ ಕ್ಲೈಮ್ಯಾಕ್ಸ್ ಬದಲಿಸಿ…’ ಎನ್ನುತ್ತಾ ಹೊರಟು ಹೋದರು. ಮುಂದೇನು ಮಾಡಬೇಕು? ಗೌಡರು ಮತ್ತೆ ಮತ್ತೆ ಯೋಚಿಸಿದರು. ಅಷ್ಟರಲ್ಲಿ ಸುದ್ದಿ ಹೊರಬಿದ್ದಾಗಿತ್ತು.‘ ಸಿನಿಮಾ ಅಷ್ಟಕ್ಕಷ್ಟೇ ಅಂತೆ….ಗೌಡರು ಅಂಗಡಿ ಮುಚ್ಚಿಕೊಂಡು ಹೋಗುತ್ತಾರೆ…ಮೊದಲೇ ಹೇಳಿದ್ದೇವು…ಕಲರ್ ಚಿತ್ರವನ್ನು ಮಾಡಬೇಡಿ ಅಂತ…’ ತಲೆಗೊಬ್ಬರು ಮಾತಾಡಿದರು. ನಿರ್ಮಾಪಕ ಚಂದೂಲಾಲ್ ಜೈನ್ ಕೂಡ, ಭಾರ್ಗವ ಬಳಿ ಇದೇ ಮಾತನ್ನು ಕೇಳಿದರು. ಆದರೆ ಭಾರ್ಗವ ಸಿನಿಮಾದ ಬಗ್ಗೆ ಪಕ್ಕಾ ಆಗಿದ್ದರು. ‘ ನೂರು ದಿನ ಓಡುವುದರಲ್ಲಿ ಅನುಮಾನ ಇಲ್ಲ…ಪಕ್ಕಾ…’ ಎಂದರು. ಗಾಂಧಿನಗರದಲ್ಲೂ ಇದೇ ವಿಷಯದ ಬಗ್ಗೆ ಚರ್ಚೆಗಳು ಶುರುವಾದವು. ಆದರೆ ಈಗೇನೂ ಮಾಡುವಂತಿರಲಿಲ್ಲ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

bangarada manushya 5

ಕೊನೆಗೂ ಗೌಡರು ಜನರ ಮೇಲೆ ಭಾರ ಚಿತ್ರವನ್ನು ತೆರೆ ಕಾಣಿಸಲು ರೆಡಿಯಾದರು. ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೇವೆ. ದುಡ್ಡನ್ನು ನೀರಿನಂತೆ ಸುರಿದಿದ್ದೇವೆ. ರಾಜ್ ನಾಮಬಲವೂ ಚಿತ್ರಕ್ಕಿದೆ, ಈಸ್ಟ್ ಮನ್ ಕಲರ್ ಚಿತ್ರ ಎನ್ನುವುದು ಜನರನ್ನು ಖಂಡಿತ ಸೆಳೆಯುತ್ತದೆ, ರಾಜ್ ಭಾರತಿ ಜೋಡಿ ಅಂದರೆ ನಿಜ ಜೀವನದಲ್ಲೂ ಗಂಡ ಹೆಂಡತಿ ಎಂಬಂತೆ ಜನರು ಭಾವಿಸಿದ್ದಾರೆ…ಇದರಲ್ಲಿ ಒಂದಲ್ಲ ಒಂದು ವಿಷಯ ಜನರಿಗೆ ಕನೆಕ್ಟ್ ಆದರೆ ಸಾಕು. ನಮ್ಮ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನ ಇಲ್ಲ….ಎಂದು ಗೌಡರು ತಮಗೇ ಹೇಳಿಕೊಂಡರು. ಆಗಿದ್ದು ಆಗೇ ಬಿಡಲಿ ಎಂದು ತಮ್ಮ ಸೋದರರಿಗೆ ಎಲ್ಲವನ್ನೂ ವಿವರಿಸಿ. ಚಿತ್ರದ ಬಿಡುಗಡೆ ತಯಾರಿ ಮಾಡಿಕೊಳ್ಳುವಂತೆ ಹೇಳಿದರು. ಅದಕ್ಕೂ ಮುನ್ನ ಸೆನ್ಸಾರ್ ಮಂಡಳಿಗೆ ಚಿತ್ರವನ್ನು ತೋರಿಸಬೇಕಿತ್ತು. ಅದಕ್ಕೂ ಒಂದು ದಿನ ನಿಗದಿಯಾಯಿತು. ಮಂಡಳಿ ಸದಸ್ಯರು ಸಿನಿಮಾ ನೋಡಿದ್ದೇ ತಡ, ಎಲ್ಲರ ಕಣ್ಣಲ್ಲಿ ಹೊಸ ಮಿಂಚು ಸುಳಿದಂತಾಯಿತು. ‘ಗೌಡರೇ…ಎಂಥಾ ಒಳ್ಳೆ ಸಿನ್ಮಾ ಮಾಡಿದೀರಿ…ನಮಗಂತೂ ಸಿಕ್ಕಾಪಟ್ಟೆ ಇಷ್ಟವಾಯಿತು. ಬರೀ ಮನರಂಜನೆ ಮಾತ್ರವಲ್ಲ…ಜನರಿಗೆ ಒಳ್ಳೆಯ ಸಂದೇಶವನ್ನೂ ಕೊಟ್ಟಿದ್ದೀರಿ. ಗ್ಯಾರಂಟಿ ಹಿಟ್ ಅಗುತ್ತೆ…ಯು ಸರ್ಟಿಫಿಕೇಟ್ ಕೊಡ್ತಿವಿ…’ ಎಂದು ಅವರ ಬಾಯಿಂದ ಮಾತು ಹೊರ ಬೀಳುತ್ತಿದ್ದಂತೆಯೇ…ಗೌಡರು ಒಮ್ಮೆ ಉಸಿರನ್ನು ಒಳಗೆ ಎಳೆದುಕೊಂಡು ಹೊರಗೆ ಬಿಟ್ಟರು. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

bangarada manushya 4

ಅದರಲ್ಲಿ ಅಲ್ಲಿವರೆಗೆ ಇದ್ದ ಆತಂಕ, ನೋವು, ಅಸಹನೆ ಎಲ್ಲವೂ ಕೊಚ್ಚಿ ಹೋಯಿತು…  ಬಂಗಾರದ ಮನುಷ್ಯನಿಗೆ ಮೊಟ್ಟ ಮೊದಲ ಗೆಲುವು ಸಿಕ್ಕಿತ್ತು…

Share This Article
Leave a Comment

Leave a Reply

Your email address will not be published. Required fields are marked *