DistrictsKarnatakaLatestRaichur

ರಾಯಚೂರಿನ 50% ಜನರಿಗೆ ಮೂತ್ರಪಿಂಡ ಸಮಸ್ಯೆ: ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣ

-ಹೆಚ್ಚು ನೀರು ಕುಡಿಯದ ಜನರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ

-ಬಿಸಿಲು ಹಾಗೂ ಅಶುದ್ಧ ನೀರು ಕಾಯಿಲೆಗೆ ಕಾರಣ

-ಬೇಕರಿ, ಹೋಟೆಲ್ ಅಡುಗೆಮನೆ ಕೆಲಸಗಾರರು ಹಾಗೂ ರೈತರು ಹೆಚ್ಚು ಬಾಧಿತರು

ರಾಯಚೂರು: ಕರ್ನಾಟಕ ರಾಜ್ಯದ ಬಿಸಿಲನಾಡು ಎಂದು ರಾಯಚೂರು ಜಿಲ್ಲೆಯನ್ನು ಕರೆಯುತ್ತಾರೆ. ನಿಜ, ಆದ್ರೆ ಆ ಬಿಸಿಲು ರಾಯಚೂರಿನ ಜನರ ಮೇಲೆ ಏನೆಲ್ಲಾ ಪರಿಣಾಮಗಳನ್ನ ಬೀರುತ್ತಿದೆ ಗೊತ್ತಾ? ಇಲ್ಲಿನ ಬಿಸಿಲಿನಿಂದಾಗಿಯೇ ಜನ ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆಯ ಮೂರು ತಿಂಗಳಲ್ಲಿ ಸಾವಿರಾರು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ರೋಗಿಗಳಲ್ಲಿ ರೈತರ ಸಂಖ್ಯೆಯೇ ಹೆಚ್ಚಾಗಿರುವುದು ದುರಂತ.

ವೈದ್ಯರೇ ಹೇಳುವ ಹಾಗೇ ಬೇಸಿಗೆಯಲ್ಲಿ ರೋಗಿಗಳ ಸಂಖ್ಯೆ ಇತರೆ ದಿನಗಳಿಗಿಂದ ಶೇಕಡಾ 100 ರಷ್ಟು ಹೆಚ್ಚಾಗಿರುತ್ತದೆ. ಜಿಲ್ಲೆಯ ಶೇಕಡಾ 50 ರಷ್ಟು ಜನರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಹದ ನಿರ್ಜಲೀಕರಣ. ಬೇಸಿಗೆಯಲ್ಲಿ ದೇಹದಿಂದ ಬೆವರು, ಮೂತ್ರ, ಉಸಿರಾಟದ ಮೂಲಕ ಹೆಚ್ಚು ನೀರು ಹೊರಹೋಗುತ್ತದೆ. ಹೆಚ್ಚೆಚ್ಚು ನೀರು ಕುಡಿಯದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಬೇಸಿಗೆ ಆರಂಭದಿಂದ ಪ್ರತೀ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಸರಿಸುಮಾರು ಮೂರದಿಂದ ನಾಲ್ಕು ಸಾವಿರ ಜನ ಮೂತ್ರಪಿಂಡ ಸಮಸ್ಯೆ ಹಾಗೂ ಕಿಡ್ನಿ ಸ್ಟೋನ್‍ನಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ರಾಯಚೂರು ಸೇರಿದಂತೆ ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ಈ ಸಮಸ್ಯೆ ವಿಪರೀತ ಮಟ್ಟಕ್ಕೆ ಮುಟ್ಟಿದೆ.

ಹೊಲದಲ್ಲಿ ಕೆಲಸ ಮಾಡುವ ರೈತರು, ಕೃಷಿ ಕೂಲಿ ಕಾರ್ಮಿಕರು, ಬೇಕರಿಗಳಲ್ಲಿ, ಹೋಟೆಲ್ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವವರಲ್ಲಿ ಹಾಗೂ ಹೆಚ್ಚು ಮಾಂಸ ಪದಾರ್ಥ ಸೇವೆನೆ ಮಾಡುವವರನ್ನ ಮೂತ್ರಪಿಂಡ ಸಮಸ್ಯೆ ಕಾಡುತ್ತಿದೆ. ಕಾಲ್ಶಿಯಂ ಹಾಗೂ ಯೂರಿಕ್ ಆಸಿಡ್ ಸ್ಟೋನ್‍ಗಳು ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಿರ್ಲಕ್ಷ್ಯ ಮಾಡುವವರು ಮೂತ್ರಪಿಂಡಗಳನ್ನೇ ಕಳೆದುಕೊಳ್ಳುತ್ತಿದ್ದಾರೆ.

ಬಿಸಿಲಿನ ಜೊತೆ ಗ್ರಾಮೀಣ ಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಕೊರತೆ ಸಹ ಕಿಡ್ನಿ ಸ್ಟೋನ್‍ಗೆ ಕಾರಣವಾಗಿದೆ. ಕೆಲ ರೋಗಿಗಳಿಗೆ ಹೊಟ್ಟೆ ನೋವು, ಜ್ವರದಂತ ಲಕ್ಷಣಗಳು ಕಾಣಿಸಿಕೊಂಡರೆ, ಇನ್ನೂ ಕೆಲವರಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೇ ಮೂತ್ರಪಿಂಡಗಳ ಗಂಭೀರ ಸಮಸ್ಯೆ ಒಮ್ಮೆಲೆ ಎದುರಾಗುತ್ತಿದೆ ಎಂದು ಮೂತ್ರಪಿಂಡ ತಜ್ಞ ಡಾ.ತಾನಾಜಿ ಕಲ್ಯಾಣಕರ್ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಬಿಸಿಲೂರ ಜನರಿಗೆ ಬಿಸಿಲಿನಿಂದ ಕಿಡ್ನಿ ಸ್ಟೋನ್ ಜೊತೆ ಜೊತೆಗೆ ಸನ್ ಸ್ಟ್ರೋಕ್, ರಕ್ತದೊತ್ತಡ ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿವೆ. ಬಿಸಿಲಿನ ತಾಪ ಹಾಗೂ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹೆಚ್ಚೆಚ್ಚು ನೀರು, ತಂಪು ಪಾನೀಯ, ಎಳನೀರು ಕುಡಿಯಲು ವೈದ್ಯರು ಸಲಹೆ ನೀಡಿದ್ದಾರೆ.

 

Leave a Reply

Your email address will not be published. Required fields are marked *

Back to top button