ಮಂಗಳೂರು: ಒಂದು ತಿಂಗಳೊಳಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‍ಗಳು(Electric Buses) ಸಂಚರಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ(M. Chandrappa) ಅವರು ಹೇಳಿದರು.
ಅವರು ನಗರದ ಕೆಎಸ್ಆರ್‌ಟಿಸಿ(KSRTC) ಬಸ್ ನಿಲ್ದಾಣದ ಆವರಣದಲ್ಲಿರುವ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮುಂದಿನ ತಿಂಗಳೊಳಗೆ ಮೊದಲ ಹಂತದಲ್ಲಿ 50 ಎಲೆಕ್ಟ್ರಿಕ್ ಬಸ್‍ಗಳ ಸಂಚಾರ ಆರಂಭಿಸಲಾಗುವುದು. ಸದ್ಯ ತೈಲೋತ್ಪನ್ನ, ಟೈರ್ ಹಾಗೂ ಬಸ್ ಬಿಡಿ ಭಾಗಗಳ ಮೊತ್ತ ಹೆಚ್ಚಿದ್ದರೂ ಕೂಡ ಪ್ರಯಾಣಿಕರ ಹಿತ ದೃಷ್ಟಿಯಿಂದ ಪ್ರಯಾಣಿಕರ ಟಿಕೆಟ್ ದರ ಹೆಚ್ಚಿಸಿಲ್ಲ. ಅರವತ್ತು ವರ್ಷಗಳ ಇತಿಹಾಸದಲ್ಲೇ ಇದೀಗ ತಿಂಗಳ ಮೊದಲ ದಿನವೇ ರಾಜ್ಯದ ಎಲ್ಲ ಕೆಎಸ್ಆರ್‌ಟಿಸಿ ಉದ್ಯೋಗಿಗಳಿಗೆ ವೇತನ ನೀಡಲಾಗುತ್ತಿದೆ ಮತ್ತು 6ನೇ ವೇತನ ಆಯೋಗದ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ಹಾಗೂ ಇತರೆ ಕಾರಣಗಳಿಂದ ಈ ಹಿಂದೆ ಸರ್ಕಾರಿ ಬಸ್‍ಗಳಿಂದ ದಿನವೊಂದಕ್ಕೆ 6 ರಿಂದ 7ಕೋಟಿಗಳಷ್ಟು ಆದಾಯ ಬರುತ್ತಿತ್ತು. ಆದರೆ ಸದ್ಯ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡ ಕಾರಣ ದಿನವೊಂದಕ್ಕೆ ಕನಿಷ್ಟ 12 ಕೋಟಿಯಷ್ಟು ವರಮಾನ ಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
450 ನೂತನ ಬಸ್ ಖರೀದಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಅವುಗಳಲ್ಲಿ ಅತ್ಯುತ್ತಮ ಸೌಲಭ್ಯವಿರುವ 50 ವೋಲ್ವೋ ಹಾಗೂ ಎಲೆಕ್ಟ್ರಿಕಲ್ ಬಸ್‍ಗಳಿರಲಿವೆ. ಒಂದು ತಿಂಗಳಿನೊಳಗೆ ರಾಜ್ಯದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ಬಸ್‍ಗಳು ಓಡಾಡಲಿವೆ. ಮಂಗಳೂರು ವಿಭಾಗದಲ್ಲಿ ಸದ್ಯ 490 ಬಸ್‍ಗಳು ಪ್ರತಿದಿನ ಸಂಚರಿಸುತ್ತಿದ್ದು, ದಿನನಿತ್ಯ 1 ಕೋಟಿಯಷ್ಟು ವರಮಾನವಿದೆ. ಆದರೆ ಪುತ್ತೂರು ವಿಭಾಗದಲ್ಲಿ ವರಮಾನ ಕಡಿಮೆಯಿದ್ದರೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿರುವ ಕಾರಣ ಬಸ್‍ಗಳನ್ನು ಕಡಿತಗೊಳಿಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ 80 ಸ್ಥಾನ ಗಳಿಸಿದ್ರೆ ನನ್ನ ಬೆರಳು ಕತ್ತರಿಸಿ ಕೊಡುತ್ತೇನೆ: ಶಿವನಗೌಡ ನಾಯಕ
ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರ ಕೂಲಿ ಉಳಿತಾಯಕ್ಕಾಗಿ ಉಚಿತ ಪಾಸ್ ವಿತರಿಸಲು ಚಿಂತಿಸಲಾಗಿದೆ. ಸದ್ಯ 1 ಲಕ್ಷ ಉಚಿತ ಪಾಸ್ ವಿತರಿಸಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದು ಇನ್ನುಳಿದಂತೆ ರಾಜ್ಯದಲ್ಲಿರುವ ಒಟ್ಟು 37 ಲಕ್ಷ ಕಟ್ಟಡ ಕಾರ್ಮಿಕರಿಗೆ ಹಂತ ಹಂತವಾಗಿ ಪಾಸ್ ವಿತರಿಸಲಾಗುವುದು. ಒಟ್ಟಾರೆ ನೂತನವಾಗಿ ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳಿಂದಾಗಿ ಸಧ್ಯ ಅನವಶ್ಯಕ ಖರ್ಚುವೆಚ್ಚಗಳು ಕಡಿಮೆಯಾಗಿದೆ ಎಂದರು.
ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಪುತ್ತೂರು ವಿಭಾಗಿಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಗೋಷ್ಠಿಯಲ್ಲಿದ್ದರು.