ಬೆಂಗಳೂರು: ಗುತ್ತಿಗೆದಾರರ ಸಂಘದವರು ಸುಖಾಸುಮ್ಮನೆ 40 ಪರ್ಸೆಂಟ್ ಕಮಿಷನ್ ಆರೋಪ ಹೊರಿಸುತ್ತಿದ್ದಾರೆ. ಈ ಕೂಡಲೇ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸಚಿವ ಮುನಿರತ್ನ ಅವರು ಎಚ್ಚರಿಸಿದರು.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ 14 ತಿಂಗಳಿನಿಂದ ಗುತ್ತಿಗೆದಾರರ ಸಂಘದವರು ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿಕೊಂಡು ಬರುತ್ತಿದ್ದಾರೆ. ಈ ಆರೋಪದಲ್ಲಿ ನನ್ನ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ಯಾವುದೇ ದಾಖಲೆ ಬಿಡುಗಡೆ ಮಾಡದೆಯೇ ಪ್ರಧಾನ ಮಂತ್ರಿಗೆ ಪತ್ರ ಬರೆದಿರುವುದಾಗಿ ಹೇಳಿಕೊಂಡು ಬರುತ್ತಿದ್ದಾರೆ. ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಚರ್ಚಿಸಿ ನಂತರ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಎಲ್ಲವನ್ನೂ ನಾನು ಗಮನಿಸಿದ್ದೇನೆ. ಇವರ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದರು. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕಿಲ್ಲ ಅವಕಾಶ – ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶ
ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಇದೆಲ್ಲ ನಡೆದಿದೆ. ಇದು ಹೀಗೆಯೇ ಮುಂದುವರಿದರೆ ಮುಂದೆ ಕಾನೂನು ರೀತಿಯಲ್ಲಿ ಕ್ರಮ ಆಗುತ್ತದೆ. ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಅವರಲ್ಲಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ಹೋರಾಟ ಮಾಡಲಿ ಎಂದು ಗುತ್ತಿಗೆದಾರರ ಸಂಘದ ವಿರುದ್ಧ ಕಿಡಿಕಾರಿದರು.
ಸುಮ್ಮನೆ ನಮ್ಮ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿ ಅವರು ಕ್ಷಮೆ ಕೋರಬೇಕು. ಕ್ಷಮೆ ಕೇಳಿಲಿಲ್ಲ ಅಂದರೆ 7 ದಿನಗಳಲ್ಲಿ ಕೋರ್ಟ್‌ನಲ್ಲಿ ಎರಡು ದೂರು ನೀಡುತ್ತಿದ್ದೇನೆ. ಕೆಂಪಣ್ಣ ಅವರ ಮೇಲಷ್ಟೇ ಅಲ್ಲ. ಇಡೀ ಗುತ್ತಿಗೆದಾರರ ಸಂಘದ ಮೇಲೆ ಕೇಸ್ ಹಾಕುತ್ತಿದ್ದೇನೆ. 50 ಕೋಟಿ ಮಾನನಷ್ಟ ಮೊಕದ್ದಮೆ ಹಾಗೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: BJPಯವರ ಭ್ರಷ್ಟಾಚಾರ ನೋಡಿದ್ರೆ ರಾಜ್ಯಕ್ಕೆ 10-15 ಪರಪ್ಪನ ಅಗ್ರಹಾರ ಜೈಲು ಬೇಕು: HDK
ಕೋರ್ಟ್‌ನಲ್ಲಿ ಬಂದು ತಮ್ಮ ಆರೋಪವನ್ನು ಸಾಬೀತು ಮಾಡಲಿ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ. ಅವರ ಆರೋಪ ಸುಳ್ಳಾಗಿದ್ದರೆ ಖಂಡಿತಾ ಅವರು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅವರಿಗೆ ಎಲ್ಲಿ ಅನುಕೂಲ ಆಗುತ್ತದೆಯೋ ಅಲ್ಲೇ ದೂರು ನೀಡಿ, ದಾಖಲೆಗಳನ್ನು ಒದಗಿಸಲಿ ಎಂದರು.