– 14 ಆರ್ಟಿಪಿಸಿಆರ್ ಹಾಗೂ 17 ಆ್ಯಂಟಿಜೆನ್ ಸೇರಿ ಒಟ್ಟು 31 ಟೆಸ್ಟ್
ಭರತಪುರ (ರಾಜಸ್ಥಾನ): ವಿಶ್ವ ಕಂಡ ಮಹಾಮಾರಿ ಕೋವಿಡ್ 19 ಬಂದು ಚಿಕಿತ್ಸೆ ಪಡೆದರೆ 14 ದಿನದ ಚಿಕಿತ್ಸೆಯಲ್ಲಿ ಚೇತರಿಸಿಕೊಳ್ಳುತ್ತಾರೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರೋ ವಿಚಾರ. ಆದರೆ ವೈದ್ಯಲೋಕಕ್ಕೆ ರಾಜಸ್ಥಾನದ ಮಹಿಳೆಯೊಬ್ಬರು ಸವಾಲಾಗಿ ಪರಿಣಮಿಸಿದ್ದಾರೆ.
ರಾಜಸ್ಥಾನದ ಭರತಪುರದ ನಿವಾಸಿ 30 ವರ್ಷದ ಶಾರದಾ ದೇವಿ ಕಳೆದ 5 ತಿಂಗಳಿನಿಂದ ಕೋವಿಡ್ 19 ಸೋಂಕಿನೊಂದಿಗೇ ಜೀವನ ನಡೆಸುತ್ತಿದ್ದಾರೆ. 2020ರ ಆಗಸ್ಟ್ 28ರಂದು ಈಕೆಯ ಪರೀಕ್ಷೆ ನಡೆಸಿದಾಗ ಮೊದಲ ಬಾರಿಗೆ ಕೋವಿಡ್ ಸೋಂಕು ಪತ್ತೆಯಾಗಿತ್ತು.
Advertisement
Advertisement
ಇದಾದ ಬಳಿಕ 14 ಬಾರಿ ಆರ್ಟಿಪಿಸಿಆರ್ ಹಾಗೂ 17 ಆ್ಯಂಟಿಜೆನ್ ಟೆಸ್ಟ್ ಸೇರಿ ಒಟ್ಟು 31 ಮಾಡಿದ್ದು ಪರೀಕ್ಷೆಯ ಫಲಿತಾಂಶವೂ ‘ಪಾಸಿಟಿವ್’ ಬರುತ್ತಿದೆ. ಈಗಾಗಲೇ ಅವರಿಗೆ ಅಲೋಪತಿ, ಹೋಮಿಯೋಪತಿ ಹಾಗೂ ಆಯುರ್ವೇದಿಕ್ ಔಷಧಿ ನೀಡುತ್ತಿದ್ದು ಆದರೆ ಇವುಗಳು ಯಾವುದೇ ಪರಿಣಾಮ ಬೀರುತ್ತಿಲ್ಲ ಎನ್ನುವುದು ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಅಚ್ಚರಿ ಮೂಡಿಸಿದೆ.
Advertisement
ಕೋವಿಡ್ ಪಾಸಿಟಿವ್ ಅಂತ ರಿಪೋರ್ಟ್ ಬರುತ್ತಿದ್ದರೂ ಶಾರದಾದೇವಿ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳುತ್ತಿದ್ದಾರೆ. ಆಶ್ರಮದ ಎರಡು ಕೊಠಡಿಯಲ್ಲೇ ಕಾಲಕಳೆಯುತ್ತಿರುವ ಅವರು ತಾವೇ ಎಲ್ಲ ಕೆಲಸ ಕಾರ್ಯಗಳನ್ನೂ ಮಾಡುತ್ತಿದ್ದಾರೆ. ಇದೇ ಅವಧಿಯಲ್ಲಿ ಅವರ ತೂಕ 8 ಕೆಜಿ ಹೆಚ್ಚಾಗಿದೆ ಎನ್ನುವುದು ಕೂಡ ವಿಶೇಷ.
Advertisement
ಲೋ ಇಮ್ಯೂನಿಟಿಯೇ ಕಾರಣ!: ಪದೇ ಪದೇ ಪರೀಕ್ಷೆ ಮಾಡಿದರೂ ಪಾಸಿಟಿವ್ ಬರುತ್ತಿರುವುದಕ್ಕೆ ಅವರ ಲೋ ಇಮ್ಯೂನಿಟಿ ಅಂಶವೇ ಕಾರಣ ಇರಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ಅಧ್ಯಯನದ ಅಗತ್ಯವಿದೆ ಎಂದು ಜೈಪುರದ ಸವಾಯಿ ಮಾನಸಿಂಗ್ ಆಸ್ಪತ್ರೆಯ ಮೈಕ್ರೋಬಯಾಲಜಿ ತಜ್ಞ ಡಾ. ಪ್ರದೀಪ್ ಕುಮಾರ್ ಹೇಳಿದ್ದಾರೆ.
5 ತಿಂಗಳಿಂದ ಐಸೋಲೇಷನ್!: ಕೋವಿಡ್ ಪಾಸಿಟಿವ್ ಅಗಿರುವ ಶಾರದಾದೇವಿ ಕಳೆದ 5 ತಿಂಗಳಿಂದ ಐಸೋಲೇಷನ್ನಲ್ಲಿದ್ದಾರೆ. ಇದಕ್ಕಾಗಿ ಆಶ್ರಮದಲ್ಲಿ ವಿಶೇಷ 2 ಕೊಠಡಿಯನ್ನು ಅವರಿಗೆ ನೀಡಲಾಗಿದೆ. ಶಾರದಾ ಅವರನ್ನು ಬಝೇರಾ ಗ್ರಾಮದಿಂದ ಇಲ್ಲಿಗೆ ಕರೆತರಲಾಗಿತ್ತು. ಈ ವೇಳೆ ಪರೀಕ್ಷೆ ಮಾಡಿದಾಗ ಆಕೆಗೆ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಇದು ಈ ಆಶ್ರಮದ ಮೊದಲ ಪಾಸಿಟಿವ್ ಪ್ರಕರಣವಾಗಿತ್ತು. ಕಳೆದ ವರ್ಷ ಆಗಸ್ಟ್ 28ರಂದು ಅವರಿಗೆ ಮೊದಲ ಟೆಸ್ಟ್ ಮಾಡಿದ್ದರು.
ಈ ಆಶ್ರಮದಲ್ಲಿ 4 ಜನರಿಗೆ ಪಾಸಿಟಿವ್ ಬಂದಿತ್ತು. ಆಗಸ್ಟ್ ಕೊನೆಯಲ್ಲಿ ಅವರನ್ನು ಭರತಪುರದ ಆರ್ಬಿಎಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ವೈದ್ಯರು ಆಕೆಯ ಮಾನಸಿಕ ಹಾಗೂ ದೈಹಿಕ ಪರಿಸ್ಥಿತಿ ಸರಿಯಿಲ್ಲ. ಆಕೆಯ ಜೊತೆಗೆ ಯಾರಾದರೂ ಸಹಾಯಕ್ಕೆ ಇರಲೇಬೇಕು ಎಂದು ಹೇಳಿ ವಾಪಸ್ ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗಾಗಿ ಆಶ್ರಮದಲ್ಲೇ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ. ಇದೀಗ ಮತ್ತೆ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ಕರೆದೊಯ್ಯಲು ನಿರ್ಧರಿಸಿದ್ದಾರೆ.