ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ 5 ವರ್ಷದ ಪುಟ್ಟ ಬಾಲಕ ಬಲಿಯಾಗಿರುವ ಘಟನೆ ಸೋಲದೇವನಹಳ್ಳಿಯ ಸಾಸ್ವೆಘಟ್ಟ ಗ್ರಾಮದಲ್ಲಿ ನಡೆದಿದೆ.
ದುರ್ಗೇಶ್(5) ನಾಯಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನವರಾಗಿರುವ ಮಲ್ಲಪ್ಪ ಹಾಗೂ ಅನಿತಾ ದಂಪತಿಯ ಮೂರನೇ ಮಗ ದುರ್ಗೇಶ್ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದಾನೆ. ಕೆಲಸ ಅರಸಿ ಬೆಂಗಳೂರಿಗೆ ಬಂದ ದಂಪತಿ ಸಾಸ್ವೆಘಟ್ಟ ಗ್ರಾಮದಲ್ಲಿ ನೆಲೆಸಿದ್ದರು. ಕಳೆದ ಮೂರ್ನಾಲ್ಕು ವರ್ಷದಿಂದ ಬೆಂಗಳೂರಿನಲ್ಲಿ ಕಟ್ಟಡದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
Advertisement
Advertisement
ದುರ್ಗೇಶ್‍ನ ತಾಯಿ ಗರ್ಭಿಣಿಯಾಗಿದ್ದು, ಅವರು ಮನೆಯಲ್ಲಿಯೇ ಇದ್ದರು. ಆದರೆ ಕೆಲಸಕ್ಕೆ ಹೋಗಿದ್ದ ತಂದೆಗೆ ಭೇಟಿಯಾಗಲು ದುರ್ಗೇಶ್ ಹೋಗುತ್ತಿದ್ದಾಗ ಆತನ ಮೇಲೆ 8-10 ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿವೆ. ಪರಿಣಾಮ ಬಾಲಕ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Advertisement
Advertisement
ಇದೇ ವ್ಯಾಪ್ತಿಯಲ್ಲಿ ನಡೆದ ಮೂರನೇ ಪ್ರಕರಣ ಇದಾಗಿದ್ದು, ಕಳೆದ ವಾರ ಬಾಲಕಿ ನಾಯಿ ದಾಳಿಗೆ ಸಾವನ್ನಪ್ಪಿದ್ದಳು. ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದೇ ಸಾವುಗಳಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯ್ತಿ ಪಿಡಿಓ ಬಳಿ ಕೇಳಿದರೆ ಬಿಬಿಎಂಪಿ ಕಡೆ ಕೈ ಮಾಡಿ, ಬಿಬಿಎಂಪಿ ಅವರು ಹಾಗೂ ಇಲ್ಲಿ ಸುತ್ತಮುತ್ತಲ ಜನರು ಸೋಲದೇವನಹಳ್ಳಿ ಬಳಿ ಕಸ, ತ್ಯಾಜ್ಯಗಳನ್ನು ಎಸೆದು ಹೋಗುತ್ತಾರೆ. ಅಲ್ಲದೆ ಬಿಬಿಎಂಪಿ ಅವರು ನಗರದಲ್ಲಿದ್ದ ಬೀದಿ ನಾಯಿಗಳನ್ನು ಹಿಡಿದು ಇಲ್ಲಿ ತಂದು ಬಿಡುತ್ತಾರೆ ಎನ್ನುತ್ತಿದ್ದಾರೆ.
ಯಲಹಂಕ ಶಾಸಕ ಎಸ್‍ಆರ್ ವಿಶ್ವನಾಥ್ ಅವರಿಗೆ ಪ್ರಶ್ನಿಸಿದರೆ, ಈ ಘಟನೆ ಬಗ್ಗೆ ಮಾತ್ರ ನನಗೆ ಮಾಹಿತಿ ಇದೆ. ಉಳಿದ ಎರಡು ಪ್ರಕರಣದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಬೀದಿ ನಾಯಿಗಳನ್ನು ಕೊಲ್ಲಲು ಹೋದರೆ ಪ್ರಾಣಿ ದಯಾ ಸಂಘದವರು ಅಡ್ಡಿ ಪಡಿಸುತ್ತಾರೆ. ಅದನ್ನು ಬೇರೆ ಕಡೆಗೆ ಬಿಟ್ಟು ಬರಲು ಕೂಡ ಅನುಮತಿ ಇಲ್ಲ. ಹೀಗಿರುವಾಗ ನಾವೇನು ಮಾಡಬೇಕು ಎಂದರು. ಬಳಿಕ ಘಟನಾ ಸ್ಥಳಕ್ಕೆ ಭೇಟಿ ಕೊಡುತ್ತೇವೆ ಜೊತೆಗೆ ಈ ಸಂಬಂಧ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
https://www.youtube.com/watch?v=WCdhrw8GDH4