– ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಗಗನಯಾತ್ರಿಗೆ ಸನ್ಮಾನ
ಬೆಂಗಳೂರು: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಅವರು ಆಕ್ಸಿಯಂ ಸ್ಪೇಸ್-4 ಮಿಷನ್ ಗಗನಯಾನದ ಬಗ್ಗೆ ಮಾತನಾಡಿದ್ದಾರೆ. 20 ದಿನಗಳ ಗಗನಯಾನಕ್ಕೆ 5 ವರ್ಷಗಳ ತರಬೇತಿ ಪಡೆದಿದ್ದೆ ಎಂದು ತಿಳಿಸಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಆಕ್ಸಿಯಂ ಸ್ಪೇಸ್-4 ಮಿಷನ್ ಯಶಸ್ವಿಯ ರುವಾರಿಯಾಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ಶುಕ್ಲಾ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ವೇಳೆ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ನೀವು ಸಹ ನನ್ನಂತೆಯೇ ಗಗನಯಾನಿ ಆಗಬಹುದು. ಆದರೆ, ಇದೊಂದೇ ಆಗಬೇಕೆಂದು ಕನಸು ಕಾಣಬೇಡಿ. ಏಕೆಂದರೆ, ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾನು ಹೀರೋ ರೀತಿ ನಿಮಗೆ ಕಾಣಬಹುದು. ಆದರೆ, ನನ್ನ ಯಾತ್ರೆಗೆ ಸಾವಿರಾರೂ ಮಂದಿ ಕೆಲಸ ಮಾಡಿದ್ದಾರೆ. ಎಂಜಿನಿಯರ್, ವೈದ್ಯರು ಹೀಗೆ ಸಾಕಷ್ಟು ಮಂದಿ ಇದ್ದಾರೆ. ಅವರಂತೆ ನೀವು ಆಗಬಹುದು ಎಂದರು.

ಸಾಕಷ್ಟು ಜನರ ಸ್ಫೂರ್ತಿ:
ನನ್ನ ಗಗನಯಾನಕ್ಕೆ ಸಾಕಷ್ಟು ಜನರ ಸ್ಪೂರ್ತಿ ಇದೆ. ಹೀಗಾಗಿ ಒಬ್ಬಿಬ್ಬರ ಹೆಸರೇಳುವುದು ಕಷ್ಟ. ಗಗನಯಾನಿ ರಾಕೇಶ್ ಶರ್ಮಾ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನೀವು ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವ ಛಲ ಇರಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ತಾಳ್ಮೆ ಇರಬೇಕು. ಏಕೆಂದರೆ, ನಾನು 20 ದಿನಗಳ ಯಾತ್ರೆಗೆ 5 ವರ್ಷಗಳ ತರಬೇತಿ ಪಡೆದಿದ್ದೇನೆ ಎಂದರು.
ಯಾತ್ರೆ ಸುಲಭವಿಲ್ಲ:
ಗಗನಯಾನ ನೀವು ಅಂದುಕೊಂಡಷ್ಟು ಸುಲಭವಾಗಿಲ್ಲ. ಹೊಸ ವಾತಾವರಣಕ್ಕೆ ಹೊಂದುಕೊಳ್ಳುವುದು ತೀರಾ ಕಷ್ಟ. ಬಾಹ್ಯಾಕಾಶಕ್ಕೆ ಹೋದ ಮೇಲೆ ನಾನು ಗಾಳಿಯಲ್ಲಿ ತೇಲಾಡುವುದು ಅಭ್ಯಾಸ ಮಾಡಿಕೊಂಡೆ. ಅಲ್ಲಿ ಹಲವಾರು ಸಂಶೋಧನೆಗಳನ್ನು ಕೈಗೊಳ್ಳಲಾಯಿತು. ಭೂಮಿಗೆ ಬರುವಾಗ ತುಂಬಾ ಕಷ್ಟವಾಗಿತ್ತು. ಬಂದ ಮೇಲೆ ಒಂದು ವಾರದ ವರೆಗೆ ನನಗೆ ನೇರವಾಗಿ ನಿಂತುಕೊಳ್ಳುವುದಕ್ಕೆ ಸಹ ಆಗುತ್ತಿರಲಿಲ್ಲ ಎನ್ನುವ ಮೂಲಕ ತಮ್ಮ ಅನುಭವನ್ನು ವಿದ್ಯಾರ್ಥಿಗಳ ಎದುರು ಬಿಚ್ಚಿಟ್ಟರು.
ಜಿಫೋರ್ಸ್ ಪ್ರಭಾವ:
ನಾನು 16-17 ವರ್ಷಗಳಿಂದ ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ಎಂದಿಗೂ ಟಚ್ ಸ್ಕ್ರೀನ್ ಬಳಕೆ ಮಾಡಿ ಏರ್‌ಕ್ರಾಫ್ಟ್, ಸ್ಪೇಸ್ ಕ್ರಾಫ್ಟ್ ಹಾರಾಟ ನಡೆಸಿರಲಿಲ್ಲ. ಆದರೆ, ಆಮೆರಿಕದ ಸ್ಪೇಸ್ ಎಕ್ಸ್‌ನ ಬಾಹ್ಯಾಕಾಶ ಯೋಜನೆಯು ಕ್ರೂ ಡ್ರ್ಯಾಗನ್ ಅನ್ನು ಕೇವಲ ಟಚ್ ಸ್ಕ್ರೀನ್‌ನಲ್ಲಿ ನಿಯಂತ್ರಿಸಬಹುದು. ಬಾಹ್ಯಾಕಾಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದರೆ, 18-20 ಜಿಪೋರ್ಸ್ ಮೈಮೇಲೆ ಬೀಳುತ್ತದೆ. ಅಂದರೆ, ಒಂದು ಮರಿಯಾನೆ, ನಮ್ಮ ಎದೆಯ ಮೇಲೆ ಕುಳಿತಂತೆ ಭಾಸವಾಗುತ್ತದೆ ಎಂದು ಕ್ಲಿಷ್ಟಕರ ವಿಚಾರಗಳನ್ನು ತಿಳಿಸಿದರು.

