ಚಿಕ್ಕಮಗಳೂರು: ಗುಡ್ಡ ಕುಸಿತ (Landslide) ಆತಂಕ ಎದುರಿಸುತ್ತಿರುವ ಕೊಪ್ಪ (Koppa) ತಾಲೂಕಿನ ಗುಡ್ಡೇತೋಟ ಗ್ರಾಮದ 17 ಕುಟುಂಬಗಳು ತೀವ್ರ ಆತಂಕದಲ್ಲಿವೆ. ಇದೀಗ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (Geological Survey Of India) 5 ಗ್ರಾಮಗಳನ್ನು ಅಪಾಯದ ಸ್ಥಳಗಳೆಂದು ಗುರುತಿಸಿ ಜನರನ್ನು ಸ್ಥಳಾಂತರ ಮಾಡಿ ಎಂದು ವರದಿ ನೀಡಿದೆ. ಈ ವರದಿ ಹಳ್ಳಿಗರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಗ್ರಾಮದಲ್ಲಿರು ಕುಟುಂಬಗಳ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸ್ಥಳಾಂತರಕ್ಕೆ ಸ್ಥಳೀಯ ನಾಯಕರು ಬಿಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹಳ್ಳಿಗರ ಮನವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಜನ ಆಕ್ರೋಶ ಹೊರಹಾಕಿದ್ದಾರೆ.
ಗ್ರಾಮದ ಎತ್ತರದ ಪ್ರದೇಶದಲ್ಲಿ ಜನ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. 31 ಮನೆಗಳಲ್ಲಿ 12 ಮನೆ ಮಳೆಗಾಲದಲ್ಲಿ ಬಿದ್ದೇ ಹೋಗಿವೆ. 6 ಕುಟುಂಬಗಳು ಜೀವದ ಭಯಕ್ಕೆ ಗ್ರಾಮವನ್ನು ತೊರೆದಿವೆ. ಉಳಿದ 17 ಕುಟುಂಬಗಳು ಬೇರೆ ದಾರಿ ಇಲ್ಲದೇ ಅಲ್ಲೇ ಜೀವನ ನಡೆಸುತ್ತಿವೆ. 2019ರಿಂದಲೂ ಪ್ರತಿ ವರ್ಷ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಭಯದಲ್ಲೇ ಬದುಕಿದ್ದಾರೆ. ಪ್ರತಿ ಮಳೆಗಾಲದಲ್ಲೂ ಧರೆ ಕುಸಿತವಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸಚಿವರು, ಅಧಿಕಾರಿಗಳು ಮಣ್ಣು ಕುಸಿತ ಆದಾಗಲೆಲ್ಲ ಬಂದು ಹೋಗುತ್ತಿದ್ದಾರೆ. ಈ ವೇಳೆ, ಸ್ಥಳಾಂತರ ಮಾಡ್ತೀವಿ ಎಂದು ಭರವಸೆ ನೀಡುತ್ತಾರೆ. ಇಷ್ಟು ವರ್ಷವಾದರೂ ಮಾಡಿಲ್ಲ ಎಂದು ಗ್ರಾಮದ ಜನ ಆತಂಕ ಹೊರಹಾಕಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ತಜ್ಞರು ಕೂಡ ಇದು ಡೇಂಜರ್ ಸ್ಪಾಟ್, ಜನರನ್ನು ಇಲ್ಲಿಂದ ಸ್ಥಳಾಂತರಿಸಿ ಎಂದು ವರದಿ ನೀಡಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಪಂಚಾಯಿತಿ ಅಧ್ಯಕ್ಷರು-ಸದಸ್ಯರು ಜಿಲ್ಲಾಡಳಿತಕ್ಕೆ ಡೆಡ್‌ಲೈನ್ ಕೊಟ್ಟಿದ್ದಾರೆ. ಸ್ಥಳಾಂತರಿಸದಿದ್ದರೆ ರಾಜೀನಾಮೆ ನೀಡಿ ಆಮರಣಾಂತ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಶತಮಾನಗಳಿಂದ ಬದುಕು ಕಟ್ಟಿಕೊಂಡಿದ್ದ ಹಳ್ಳಿಗರು ಬೇರೆ ಊರಿನಲ್ಲಿ ಅಥವಾ ದೂರದಲ್ಲಿ ಜಾಗ ಕೊಟ್ಟರೆ ಹೋಗಲ್ಲ, ಗುಡ್ಡೇತೋಟ ವ್ಯಾಪ್ತಿಯಲ್ಲೇ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಇದೀಗ, ಗುಡ್ಡೇ ತೋಟದಲ್ಲೇ 32 ಗುಂಟೆ ಜಾಗವನ್ನ ಗುರುತಿಸಿಸಲಾಗಿದೆ. ಕಸ್ತೂರಿ ರಂಗನ್ ವರದಿಯ ಆತಂಕದ ಮಧ್ಯೆಯೂ ಅರಣ್ಯ ಇಲಾಖೆ ಕ್ಲಿಯರೆನ್ಸ್ ಕೊಟ್ಟಿದೆ. ಅಲ್ಲಿಗೆ ಹೋಗೋದಕ್ಕೆ ಜನನಾಯಕರು ಬಿಡುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೇ ಮುಂದಿನ ಮಳೆಗಾಲಕ್ಕೆ ಒಂದೇ ಒಂದೂ ಮನೆಯೂ ಉಳಿಯಲ್ಲ. ಎಲ್ಲವೂ ಬಿದ್ದು ಹೋಗುತ್ತೆ. ಹಾಗಾಗಿ, ಅರಣ್ಯ ಇಲಾಖೆ ಕ್ಲಿಯರೆನ್ಸ್ ಕೊಟ್ಟಿದೆ. ತಕ್ಷಣ ನಮ್ಮನ್ನು ಸ್ಥಳಾಂತರಿಸಿ ಎಂದು ಆಗ್ರಹಿಸಿದ್ದಾರೆ.