ಮಂಡ್ಯ: ಜಿಲ್ಲಯ ಕೆ.ಆರ್.ಪೇಟೆ ತಾಲೂಕಿನ ಅಪ್ರಾಪ್ತನನ್ನು ಪುಸಲಾಯಿಸಿ ತೃತೀಯ ಲಿಂಗಿಯಾಗಿ ಪರಿವರ್ತಿಸಿದ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕೆ.ಆರ್.ಪೇಟೆ ಪೊಲೀಸರು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ.
ಅಪ್ರಾಪ್ತನನ್ನು ತೃತೀಯ ಲಿಂಗಿಯಾಗಿ ಪರಿವರ್ತಿಸಿದ ಆರೋಪದ ಮೇಲೆ ಮಂಗಳಮುಖಿಯರಾದ ಜಯಶ್ರೀ, ಮಂದಾರ, ಮಹೇಶ್ವರಿ ಮತ್ತು ಆತನ ಜೊತೆ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪ ಮೇಲೆ ಅರವಿಂದ್ ಹಾಗೂ ಅಜಯ್ ಎಂಬವರನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?
ತಾಲೂಕಿನ ಗ್ರಾಮವೊಂದರಿಂದ ಫೆ. 4ರಂದು ಅಪ್ರಾಪ್ತ ನಾಪತ್ತೆಯಾಗಿದ್ದ. ಈತನನ್ನು ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ, ಅಕ್ಟೋಬರ್ ನಲ್ಲಿ ಇದ್ದಕ್ಕಿದ್ದಂತೆ ಗ್ರಾಮಕ್ಕೆ ಬಂದ ಆತ ತೃತೀಯ ಲಿಂಗಿಯಾಗಿ ಪರಿವರ್ತನೆಯಾಗಿದ್ದ. ಇದನ್ನು ಕಂಡು ಕುಟುಂಬದವರು ಗಾಬರಿಗೊಂಡಿದ್ದರು. ಈ ಬಳಿಕ ಅಪ್ರಾಪ್ತನ ಅಜ್ಜಿ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮೊಮ್ಮಗನ ಸ್ಥಿತಿಗೆ ಕಾರಣರಾದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಬಳಿಕ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಹೊಸ ವಿಷಯಗಳು ತಿಳಿದುಬಂದಿತು. ಪ್ರಕರಣದಲ್ಲಿ ಹಲವು ಜನರ ಕೃತ್ಯ ಇರುವುದು ಬೆಳಕಿಗೆ ಬಂದಿದೆ.
10ನೇ ತರಗತಿ ವಿದ್ಯಾಭ್ಯಾಸ ನಿಲ್ಲಿಸಿದ ಅಪ್ರಾಪ್ತ ಬೆಂಗಳೂರಿನ ಹೊಟೇಲ್‍ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಆಗಾಗ ಅಜ್ಜಿ ಹಾಗೂ ಅಪ್ಪನ ಜೊತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದನು. ಈ ವೇಳೆ ಈತನಿಗೆ ಮಂಗಳಮುಖಿಯರ ಪರಿಚಯವಾಗಿದೆ. ಬಡ ಹುಡುಗನ ಕಷ್ಟವನ್ನು ತಿಳಿದ ಅವರು, ಹಣ ಕೊಟ್ಟು ಪುಸಲಾಯಿಸಿದ್ದರು. ಕೆಲ ದಿನದ ನಂತರ ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿದ್ದು, ಬಳಿಕ ಸೀರೆ ಉಡಿಸಿ, ಭಿಕ್ಷಾಟನೆ ಮಾಡಿಸಿದ್ದಾರೆ. ದಿನ ಕಳೆದಂತೆ ಆತನು ಅವರಂತೆಯೇ ಆಡಲು ಪ್ರಾರಂಭಿಸಿದ್ದಾನೆ. ಇದನ್ನೇ ದುರುಪಯೋಗಪಡಿಸಿಕೊಂಡ ಮಂಗಳಮುಖಿಯರು ಜೂ. 29ರಂದು ಬೆಂಗಳೂರಿನ ನಾಗರಬಾವಿ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.
700ಕ್ಕೂ ಹೆಚ್ಚು ಚಿಕಿತ್ಸೆ:
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶಸ್ತ್ರಚಿಕಿತ್ಸೆ ಮಾಡಿದ ಖಾಸಗಿ ಆಸ್ಪತ್ರೆಗೂ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಜೊತೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರನ್ನು ಪತ್ತೆ ಮಾಡಿದ್ದಾರೆ. 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಪ್ರಕಾರ ಅಪ್ರಾಪ್ತರನ್ನು ಬಲವಂತವಾಗಿ ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಅಪರಾಧ. ಆದರೆ, ಕಾನೂನು ಬಾಹಿರವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆ ಪೊಲೀಸರು ವೈದ್ಯರೊಬ್ಬರನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ 700ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಚಾರಣೆ ವೇಳೆ ಪ್ರಜ್ಞಾಹೀನರಾದ ವೈದ್ಯರನ್ನು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಗ್ಯ ಚೇತರಿಸಿಕೊಂಡ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆಂದು ತಿಳಿದುಬಂದಿದೆ. ಈತ ಅಪ್ರಾಪ್ತನಾದರೂ 19 ವರ್ಷ ವಯಸ್ಸಾಗಿದ್ದು, ಶಸ್ತ್ರಚಿಕಿತ್ಸೆ ಮಾಡಬಹುದು ಎಂದು ವಕೀಲರೊಬ್ಬರು ನೋಟರಿ ನೀಡಿದ್ದಾರೆ. ಆದರೆ ಶಾಲೆಯಲ್ಲಿ ತನಿಖೆ ನಡೆಸಿದ ವೇಳೆ ಆತನಿಗೆ 16 ವರ್ಷ ವಯಸ್ಸಾಗಿದೆ ಎಂದು ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv