Connect with us

ವಿಶ್ವ ಚಾಂಪಿಯನ್ ಸಾಕ್ಷಮ್ ಯಾದವ್ ಸೇರಿ ಐವರು ಪವರ್ ಲಿಫ್ಟರ್‍ಗಳು ಅಪಘಾತದಲ್ಲಿ ಸಾವು

ವಿಶ್ವ ಚಾಂಪಿಯನ್ ಸಾಕ್ಷಮ್ ಯಾದವ್ ಸೇರಿ ಐವರು ಪವರ್ ಲಿಫ್ಟರ್‍ಗಳು ಅಪಘಾತದಲ್ಲಿ ಸಾವು

ನವದೆಹಲಿ: ಭಾನುವಾರದಂದು ದೆಹಲಿ- ಚಂಡೀಘಡ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಪವರ್ ಲಿಫ್ಟರ್‍ಗಳು ಸಾವನ್ನಪ್ಪಿದ್ದಾರೆ.

ವಿಶ್ವ ಚಾಂಪಿಯನ್ ಸಾಕ್ಷಮ್ ಯಾದವ್(23), ಟಿಕಮ್‍ಚಂದ್, ಸೌರಭ್, ಯೋಗೇಶ್ ಹಾಗೂ ಹರೀಶ್ ರಾಯ್ ಅಪಘಾತದಲ್ಲಿ ಮೃತಪಟ್ಟ ಪವರ್ ಲಿಫ್ಟರ್‍ಗಳು. ಅಪಘಾತದಲ್ಲಿ ಯಾದವ್ ಹಾಗೂ ರೋಹಿತ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದರು.

ಯಾದವ್ ಅವರನ್ನು ರಾಜಾ ಹರೀಶ್ ಚಂದ್ರ ಆಸ್ಪತ್ರೆಗೆ ದಾಖಲಿಸಿ ನಂತರ ಮ್ಯಾಕ್ಸ್ ಆಸ್ಪತ್ರೆ, ಅನಂತರ ಏಮ್ಸ್ ಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಉಳಿದ ನಾಲ್ವರು ಪವರ್ ಲಿಫ್ಟರ್‍ಗಳನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಬದುಕುಳಿದಿರುವ ರೋಹಿತ್, ಸದ್ಯ ಲೋಕ್ ನಾಯಕ್ ಜೈಪ್ರಕಾಶ್ ನರಾಯಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ದಟ್ಟ ಮಂಜು ಹಾಗೂ ಅತೀ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಕುಡಿದು ವಾಹನ ಚಾಲನೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

6 ಅಥ್ಲೀಟ್‍ಗಳು ದೆಹಲಿಯಿಂದ ಪಾಣಿಪತ್‍ಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ತಮ್ಮ ಪವರ್‍ಲಿಫ್ಟಿಂಗ್ ಕಿಟ್‍ನೊಂದಿಗೆ ಪ್ರಯಾಣಿಸುತ್ತಿದ್ದರು. ಶನಿವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ದೆಹಲಿ ಹರಿಯಾಣ ಗಡಿ ಭಾಗದಲ್ಲಿರುವ ಅಲಿಪುರ್ ಗ್ರಾಮದ ಬಳಿ ಕಾರು ಅಪಘಾತಕ್ಕೀಡಾಗಿದೆ. ಘಟನೆಯಿಂದಾಗಿ ಕಾರು ಹಲವು ಬಾರಿ ಉರುಳಿ ಕಂಬಕ್ಕೆ ಡಿಕ್ಕಿಯಾಗಿದೆ. ಕಾರಿನ ಛಾವಣಿ ಸಂಪೂರ್ಣವಾಗಿ ಜಖಂಗೊಂಡಿದೆ.

ಯಾದವ್ ಅವರು ವಿಶ್ವ ಚಾಂಪಿಯನ್‍ಶಿಪ್‍ಗಳಲ್ಲಿ 2016ರಲ್ಲಿ ಕಿರಿಯರ ವಿಭಾಗದಲ್ಲಿ ಹಾಗೂ 2017ರಲ್ಲಿ ಹಿರಿಯರ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು ಎಂದು ಅವರ ಕೋಚ್ ಸುನಿಲ್ ಲೋಚಬ್ ಹೇಳಿದ್ದಾರೆ.

Advertisement
Advertisement