ಉಡುಪಿ: ಜಿಲ್ಲೆಯಲ್ಲಿ ಇಂದು ಐದು ಮಂದಿಗೆ ಕೊರೊನಾ ಲಕ್ಷಣ ಕಂಡುಬಂದಿದೆ. ವಿದೇಶದಿಂದ ಬಂದ ಐವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿದ್ದು ಮೂರು ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ಐವರ ಪೈಕಿ ಮೂವರನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಿಶೇಷ ಘಟಕಕ್ಕೆ ದಾಖಲು ಮಾಡಲಾಗಿದೆ. ಓರ್ವನನ್ನು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆಗೆ, ಇನ್ನೊಬ್ಬನನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ವಿಶೇಷ ನಿಗಾ ಘಟಕಕ್ಕೆ ದಾಖಲು ಮಾಡಲಾಗಿದೆ. ದುಬೈ-ಕತಾರ್, ಅಬುಧಾಬಿ- ಬೆಹರೇನ್ ದೇಶದಿಂದ ಬಂದ ಐದು ಮಂದಿಯಲ್ಲಿ ಕೊರೊನಾದ ಲಕ್ಷಣಗಳು ಕಂಡು ಬಂದಿತ್ತು.
ಜ್ವರ, ಕಫ ಮತ್ತು ಎದೆನೋವು ಕಂಡುಬಂದ ಹಿನ್ನೆಲೆಯಲ್ಲಿ ವಿದೇಶದಿಂದ ಬಂದ ಐವರನ್ನು ಆಸ್ಪತ್ರೆಗೆ ದಾಖಲಿಸಿ ವಿಶೇಷ ನಿಗಾ ವಹಿಸಲಾಗಿದೆ. ಐದು ಮಂದಿ ಶಂಕಿತ ಸೋಂಕಿತರ ಗಂಟಲಿನ ಸ್ರಾವವನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ ಶಂಕಿತರ ಸಂಖ್ಯೆ 11ಕ್ಕೆ ಏರಿದ್ದು 11 ಮಂದಿಯ ವೈದ್ಯಕೀಯ ವರದಿಗಳೂ ಬರಬೇಕಾಗಿದೆ.
ಹಕ್ಕಿ ಜ್ವರ, ಮಂಗನ ಕಾಯಿಲೆ ಮತ್ತು ಕೊರೊನಾ ಸೋಂಕು ಪತ್ತೆ ಕಾರ್ಯ ಇರುವುದರಿಂದ ಶಿವಮೊಗ್ಗದ ಪ್ರಯೋಗಾಲಯಕ್ಕೆ ಬಹಳ ಒತ್ತಡವಾಗಿದೆ. ಹೀಗಾಗಿ ಎರಡು ದಿನಕ್ಕೊಮ್ಮೆ ಸೋಂಕಿತರ ಮೆಡಿಕಲ್ ವರದಿ ಬರಲಿದೆ ಎಂದು ಡಿಹೆಚ್‍ಒ ಡಾ. ಸುಧೀರ್ ಚಂದ್ರ ಸೋಡಾ ಮಾಹಿತಿ ನೀಡಿದ್ದಾರೆ. ಮಂಗಳವಾರ ಐವರು ಸೋಂಕಿತರು ಆಸ್ಪತ್ರೆಗೆ ಸೋಂಕಿತರು ದಾಖಲಾಗಿದ್ದು, ಅವರ ವೈದ್ಯಕೀಯ ವರದಿ ಬರಬೇಕಾಗಿದೆ.