ಲಕ್ನೋ: ನಾಪತ್ತೆಯಾಗಿರುವ ಮಗನನ್ನು ಹುಡುಕುತ್ತಾ ತಂದೆಯೊಬ್ಬರು 5 ತಿಂಗಳಿಂದ ಸುಮಾರು 1500 ಕಿಮೀ ದೂರು ಸೈಕಲ್ ತುಳಿದಿರೋ ಮನಕಲಕುವ ಘಟನೆಯಯೊಂದು ವರದಿಯಾಗಿದೆ.
ಮೂಲತಃ ಉತ್ತರ ಪ್ರದೇಶದ ಹಾತ್ರಾಸ್ ಜಿಲ್ಲೆಯ ನಿವಾಸಿಯಾಗಿರುವ 48 ವರ್ಷದ ಸತೀಶ್ ಚಂದಾ ಒಬ್ಬ ರೈತರಾಗಿದ್ದು, ಮಗನ ಹುಡುಕಾಟದಲ್ಲಿದ್ದಾರೆ. 6 ತಿಂಗಳ ಹಿಂದೆ ಇವರ 11 ವರ್ಷದ ಮಾನಸಿಕ ಅಸ್ವಸ್ಥ ಮಗ ನಾಪತ್ತೆಯಾಗಿದ್ದಾನೆ. ಅಂದಿನಿಂದಲು ಪೊಲೀಸರ ಸಹಾಯವನ್ನು ತೆಗೆದುಕೊಳ್ಳದೆ ಸೈಕಲ್ ತುಳಿಯುತ್ತ ಊರೂರು ಅಲೆಯುತ್ತಾ ಮಗನಿಗಾಗಿ ಹುಡುಕುತ್ತಿದ್ದಾರೆ.
ಶಾಲೆಗೆ ಹೋದವನು ವಾಪಸ್ ಬರಲಿಲ್ಲ: ಚಂದಾ ಅವರು ಈಗಾಗಲೇ ದೆಹಲಿ ಮತ್ತು ಹರಿಯಾಣ ದಲ್ಲಿ ಹುಡುಕಾಡಿ ಈಗ ಆಗ್ರಾ ಸಮೀಪದ ಎಟ್ಮಾದ್ಪುರ ತಲುಪಿದ್ದಾರೆ. ನಾನು ಹತ್ರಾಸ್ ಜಿಲ್ಲೆಯ ದ್ವಾರಿಕಾಪುರ್ ಗ್ರಾಮದವನು, ಜೂನ್ 24 ರಂದು ನನ್ನ ಮಗ ಗೋದ್ನಾ ಶಾಲೆಗೆಂದು ಮನೆಯಿಂದ ಹೋಗಿ ಮತ್ತೆ ಸಂಜೆ ಮನೆಗೆ ವಾಪಸ್ ಬರಲಿಲ್ಲ. ಶಾಲೆಯಲ್ಲಿ ಸ್ನೇಹಿತರ ಬಳಿ ವಿಚಾರಿಸಿದಾಗ ಕೆಲವರು ಸಸ್ನಿ ರೈಲ್ವೇ ನಿಲ್ದಾಣದ ಬಳಿ ನೋಡಿದೆವು ಎಂದು ಹೇಳಿದರು. ಅಲ್ಲಿಗೂ ಹೋಗಿ ಹುಡುಕಾಡಿದೆವು. ಆದರೆ ಅಲ್ಲೂ ಸಿಗಲಿಲ್ಲ ಎಂದರು.
ಕೊನೆಗೆ ನಾಲ್ಕು ದಿನ ಕಾದು ಜೂನ್ 28 ರಂದು ಪೊಲೀಸರಿಗೆ ದೂರು ನೀಡಿದೆ. ಆದರೆ ಅವರು ದೂರು ದಾಖಲಿಸಲು ನಿರಾಕರಿಸಿದರು. ನಾನು ಮತ್ತೆ ಮತ್ತೆ ಮನವಿ ಮಾಡಿದಾಗ ದೂರಿನ ಪ್ರತಿ ಮೇಲೆ ಸ್ಟ್ಯಾಂಪ್ ಒತ್ತಿ, ಸರಿ ಹೋಗು ಎಂದರು. ಬಳಿಕ ನಾನೇ ಸೈಕಲ್ ತೆಗೆದುಕೊಂಡು ಮಗನಿಗಾಗಿ ಹುಡುಕಾಟ ಆರಂಭಿಸಿದೆ. ನನ್ನಲ್ಲಿ ಹಣವಿಲ್ಲ, ಅಧಿಕಾರ ಇಲ್ಲ, ನನಗೆ ಯಾರು ಸಹಾಯ ಮಾಡುತ್ತಾರೆ? ಎಂದು ಸತೀಶ್ ಚಂದ್ ಅಲವತ್ತುಕೊಂಡಿದ್ದಾರೆ.
ನನ್ನ ಮಗನನ್ನು ನೋಡಿದ್ರಾ?: ಇಲ್ಲಿವರೆಗೂ ದೆಹಲಿ, ಕಾನ್ಪುರ, ರೆವತಿ, ಹರಿಯಾಣ ಸೇರಿದಂತೆ ಸುಮಾರು 1,500 ಕಿ.ಮೀ ದೂರವನ್ನು ಸೈಕಲ್ ಮೂಲಕ ಕ್ರಮಿಸಿದ್ದಾರೆ. 100 ಗ್ರಾಮಗಳಿಗೆ ತಲುಪಿ ಸಾವಿರಾರು ಜನರಿಗೆ ಮಗನ ಫೋಟೋ ತೋರಿಸಿ, ನಮ್ಮ ಹುಡುಗನನ್ನ ನೋಡಿದ್ರಾ? ಎಂದು ಕೇಳುತ್ತಾ ಹುಡುಕುತ್ತಿದ್ದಾರೆ. ಪ್ರಸ್ತುತ ಎತ್‍ಮದ್‍ಪುರದ ಬ್ರಹ್ಮನ್ ಗ್ರಾಮದಲ್ಲಿ ಇದ್ದಾರೆ. ಇವರ ಬಗ್ಗೆ ತಿಳಿದ ಆಗ್ರಾದ ಮಕ್ಕಳ ಹಕ್ಕುಗಳ ಕಾರ್ಯಕರ್ತ ನರೇಶ್ ಪರಸ್, ಉತ್ತರಪ್ರದೇಶ ಪೊಲೀಸರಿಗೆ ಟ್ವೀಟ್ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪೊಲೀಸರಷ್ಟೇ ಅಲ್ಲದೆ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಮುಖ್ಯಮಂತ್ರಿಗಳ ಜನ್‍ಸುನ್ವಾಯಿ ಪೋರ್ಟಲ್‍ಗೂ ನರೇಶ್ ಪರಸ್ ಪೋಸ್ಟ್ ಮಾಡಿದ್ದಾರೆ.
ಇಬ್ಬರು ಮಕ್ಕಳನ್ನ ಕಳೆದುಕೊಂಡಿದ್ದ ಪೋಷಕರು: ಸತೀಶ್ ಚಂದ್ ಪತ್ನಿ ಅರ್ಚನಾ ಕೂಡ ಮಗ ವಾಪಸ್ ಬರುತ್ತಾನೆಂಬ ಭರವಸೆಯಲ್ಲಿದ್ದಾರೆ. ಇವರ ಹಿರಿಯ ಮಗಳು ಸರಿತಾ 2005ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ನಂತರ 2011ರಲ್ಲಿ 9 ವರ್ಷದ ಮಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಈಗ ಮತ್ತೋರ್ವ ಮಗನೂ ಕಾಣೆಯಾಗಿದ್ದು, ಪೋಷಕರಿಗೆ ದಿಕ್ಕು ತೋಚದಂತಾಗಿದೆ.
ಇವರು ಸುತ್ತಾಡಿದ ಜಿಲ್ಲೆಗಳಲ್ಲಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದ ಹಲವರ ಫೋನ್ ನಂಬರ್ ತೆಗೆದುಕೊಂಡಿದ್ದಾರೆ. ನನ್ನ ಮಗ ಒಂದಲ್ಲಾ ಒಂದು ದಿನ ಸಿಕ್ಕರೆ ಅವರು ನಮಗೆ ವಿಷಯ ತಿಳಿಸುತ್ತಾರೆ ಅಂತ ನಂಬಿದ್ದಾರೆ.