ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ದೋಸ್ತಿ ಸರ್ಕಾರಕ್ಕೆ ಸೋಲಿನ ಆತಂಕ ಶುರುವಾಗಿದೆ. ಇತ್ತ ಮೈತ್ರಿ ಸೋಲಿನ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್‍ನ ಐವರು ಶಾಸಕರು ಮತ್ತು ಸಚಿವರೊಬ್ಬರು ಹೋಗಲು ರೆಡಿ ಇದ್ದಾರೆ ಎಂದು ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿದೆ.
ಇನ್ನೂ ಎರಡು ದಿನದಲ್ಲಿ ಮಂತ್ರಿ ಸೇರಿ 5 ಶಾಸಕರು ರಾಜೀನಾಮೆಗೆ ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಜೆಪಿ ಪಾಳಯದಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಬಿಜೆಪಿ ನಾಯಕರನ್ನ ಆರು ಮಂದಿ ಶಾಸಕರು ಸಂಪರ್ಕ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಶುಕ್ರವಾರ ರಾತ್ರಿಯೇ ಬಿಜೆಪಿ ನಾಯಕರನ್ನು ಸಂಪರ್ಕ ಮಾಡಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಇಂದು ಅಥವಾ ನಾಳೆ ರಾಜೀನಾಮೆ ಪರ್ವ ಸಾಧ್ಯತೆ ಇದೆ. ಇದರಿಂದ ರಾಜ್ಯ ಬಿಜೆಪಿ ವಲಯದಲ್ಲಿ ರಾಜೀನಾಮೆ ಚರ್ಚೆ ಶುರುವಾಗಿದೆ.
ಬಿಜೆಪಿ ಸಂಪರ್ಕದಲ್ಲಿರೋರು ಯಾರು?
ಹೊಸಕೋಟೆ ಶಾಸಕ, ಸಚಿವ, ಎಂ.ಟಿ.ಬಿ.ನಾಗರಾಜ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಮತ್ತು ಬೇಲೂರು ಶಾಸಕ ಲಿಂಗೇಶ್ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ.