ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಬಳಿ ನಡೆದ ಸ್ಫೋಟದಿಂದ (Delhi Red Fort Blast) ದೇಶವೇ ಬೆಚ್ಚಿಬಿದ್ದಿದೆ. ಸ್ಫೋಟದಲ್ಲಿ 9 ಜನ ಸಾವನ್ನಪ್ಪಿದ್ದು, ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಸ್ಥರ ಕನಸು ಛಿದ್ರವಾಗಿದೆ.
ಬಿಹಾರದ ಪಂಕಜ್ ಸೈನಿ (22), ಕ್ಯಾಬ್ ಚಾಲಕನಾಗಿದ್ದು, ಚಾಂದನಿ ಚೌಕ್‌ನಲ್ಲಿ ಒಬ್ಬ ಪ್ರಯಾಣಿಕನನ್ನು ಇಳಿಸಿದ್ದ. ಉತ್ತರ ಪ್ರದೇಶದ ಶಾಮ್ಲಿಯ ನೋಮನ್ ತನ್ನ ಸೌಂದರ್ಯವರ್ಧಕ ಅಂಗಡಿಗೆ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅಲ್ಲಿಗೆ ಬಂದಿದ್ದ. ಮತ್ತೊಬ್ಬ ದೆಹಲಿ ಸಾರಿಗೆ ನಿಗಮದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅಶೋಕ್ ಕುಮಾರ್, ಘಟನೆಯಲ್ಲಿ ವ್ಯಕ್ತಿಯೊಬ್ಬನನ್ನು ಭೇಟಿ ಮಾಡಲು ಅಲ್ಲಿಗೆ ಬಂದಿದ್ದ. ಇದನ್ನೂ ಓದಿ: ಉಮರ್ 2 ತಿಂಗಳ ಹಿಂದೆ ಮನೆಗೆ ಬಂದಿದ್ದ – ದೆಹಲಿ ಸ್ಫೋಟದಿಂದ ನಮಗೂ ಆಘಾತವಾಗಿದೆ ಎಂದ ಅತ್ತಿಗೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತರ ಕುಟುಂಬಸ್ಥರು ಕಣ್ಣೀರಿನ ಕತೆ ಬಿಚ್ಚಿಟ್ಟಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಪಂಕಜ್ ಸೈನಿಯವರ ತಂದೆ ಮಾತನಾಡಿ, ನಮ್ಮ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದ ನನ್ನ ಮಗನಾಗಿದ್ದ ಎಂದು ಭಾವುಕರಾಗಿದ್ದಾರೆ. ನಾನು ಏನು ಹೇಳಲಿ? ಪಂಕಜ್ ಚಾಂದನಿ ಚೌಕ್‌ನಲ್ಲಿ ಒಬ್ಬ ಪ್ರಯಾಣಿಕನನ್ನು ನನ್ನ ಮಗ ಇಳಿಸಿದ್ದ. ಈ ವೇಳೆ ಸ್ಫೋಟ ಸಂಭವಿಸಿದೆ. ನಾವು ಸರ್ಕಾರದಿಂದ ನ್ಯಾಯವನ್ನು ಕೋರುತ್ತೇವೆ, ನ್ಯಾಯ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಅಶೋಕ್ ಕೂಡ ಎಂಟು ಜನರ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದರು. ಮೂಲತಃ ಅಮ್ರೋಹಾದವರಾದ ಅವರು ದೆಹಲಿಯ ಜಗತ್‌ಪುರದಲ್ಲಿ ತಮ್ಮ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ದೆಹಲಿ ಸಾರಿಗೆ ನಿಗಮದ ಉದ್ಯೋಗಿಯಾಗಿದ್ದ ಅವರು ದುರಂತ ಸಂಭವಿಸಿದಾಗ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲು ಆ ಪ್ರದೇಶಕ್ಕೆ ಬಂದಿದ್ದರು.
ಅಶೋಕ್ ಅವರ ಸೋದರ ಸಂಬಂಧಿಯೊಬ್ಬರು ಮಾಧ್ಯಮಗಳ ಜೊತೆ ಮಾತನಾಡಿ, ಸ್ಫೋಟದ ಕೆಲವು ಗಂಟೆಗಳ ನಂತರ, ಮೃತರ ಪಟ್ಟಿಯಲ್ಲಿ ಅವರ ಹೆಸರನ್ನು ನೋಡಿದೆ. ಬಳಿಕ ದೃಢೀಕರಿಸಲು ಕರೆ ಮಾಡಿದೆ, ಆದರೆ ಪ್ರತಿಕ್ರಿಯೆ ಬರಲಿಲ್ಲ. ಅವರ ಬೈಕ್ ಸಹ ಕಾಣೆಯಾಗಿದೆ. ಅವರ ತಾಯಿ ಸೋಮವತಿ ತಮ್ಮ ಹಿರಿಯ ಮಗ ಸುಭಾಷ್ ಜೊತೆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಸುಭಾಷ್ ಆಗಾಗ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅಶೋಕ್ ಒಬ್ಬಂಟಿಯಾಗಿ ಕುಟುಂಬದ ಜವಾಬ್ದಾರಿಗಳನ್ನು ಹೊತ್ತುಕೊಂಡರು. ಹೆಚ್ಚುವರಿ ಆದಾಯಕ್ಕಾಗಿ ಅಶೋಕ್ ರಾತ್ರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿಯೂ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟ ಶಾಮ್ಲಿಯ ನೋಮನ್ (22) ಅವರು ತಮ್ಮ ಅಂಗಡಿಗೆ ಸೌಂದರ್ಯವರ್ಧಕಗಳನ್ನು ಖರೀದಿಸಲು ಚಾಂದನಿ ಚೌಕ್‌ನ ಸಗಟು ಮಾರುಕಟ್ಟೆಗೆ ಹೋಗಿದ್ದರು. ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಅವರ ಸೋದರಸಂಬಂಧಿ ಅಮನ್ ಗಾಯಗೊಂಡಿದ್ದಾರೆ. ನೋಮನ್ ಅವರ ಚಿಕ್ಕಪ್ಪ ಫುರ್ಖಾನ್ ಮಾತನಾಡಿ, ನಾವು ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ. ಈ ಸಾವು ನಮ್ಮ ಕುಟುಂಬವನ್ನು ಕಗ್ಗತ್ತಲೆಗೆದೂಡಿದೆ ಎಂದು ಕಣ್ಣೀರಿಟ್ಟಿದ್ದಾರೆ.
ಮೆಡಿಕಲ್ ಹೊಂದಿದ್ದ ಅಮರ್ ಕಟಾರಿಯಾ (34) ಎಂಬವರು ಸಹ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಸ್ಫೋಟ ಸಂಭವಿಸಿದಾಗ ಅವರು ಮನೆಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ. ಲೋಕ ನಾಯಕ್ ಆಸ್ಪತ್ರೆಯ ಹೊರಗೆ ಅವರ ವೃದ್ಧ ತಂದೆ ಮಗನನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಹಲವು ತಂಡಗಳು, 100ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳು, ಒಂದು i20 – ಪೊಲೀಸರು ನಿಖರವಾಗಿ ಕಾರನ್ನು ಟ್ರ್ಯಾಕ್ ಮಾಡಿದ್ದು ಹೇಗೆ?

