ಬೆಂಗಳೂರು: ನಗರದ ಗೋರಿಪಾಳ್ಯದಲ್ಲಿ ಚಂದ್ರು ಹತ್ಯೆ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದರು.
ಮೊನ್ನೆ ರಾತ್ರಿ ಹತ್ಯೆಯಾದ ಚಂದ್ರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸಿ.ಟಿ. ರವಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಹತ್ಯೆಗೀಡಾದ ಚಂದ್ರು ಅವರ ಸಹೋದರ ನವೀನ್, ನಮ್ಮ ಪಕ್ಷದ ಬೂತ್ ಸಮಿತಿ ಕಾರ್ಯದರ್ಶಿ ಎಂದ ಅವರು, ಏಕಾಏಕಿ ಹತ್ಯೆ ನಡೆದಿದೆ. ಅಂಗಡಿಯವರೂ ನೆರವಿಗೆ ಬರಲಿಲ್ಲ. ಇಲ್ಲಿ ಪೂರ್ವದ್ವೇಷ ಇರಲಿಲ್ಲ. ಬೈಕ್ ತಾಗಿದ್ದನ್ನೇ ನೆಪ ಮಾಡಿ, ಕನ್ನಡ ಮತ್ತು ತಮಿಳು ಮಾತ್ರ ಬರುವುದಾಗಿ ಹೇಳಿದ ಚಂದ್ರುವನ್ನು ಉರ್ದುವಿನಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ ಎಂಬುದಾಗಿ ಮನೆಯವರು ಹೇಳುತ್ತಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಬೇರೆ ಪಕ್ಷಗಳು ಹಣಬಲದಲ್ಲಿ ಶ್ರೀಮಂತ, AAP ವಿಚಾರ ಧಾರೆಯಲ್ಲಿ ಶ್ರೀಮಂತ: ಭಾಸ್ಕರ್ ರಾವ್
Advertisement
Advertisement
ಪೊಲೀಸ್ ಇಲಾಖೆಯವರು ಬಹಳಷ್ಟು ಸಾರಿ ವಾಸ್ತವಿಕ ಸಂಗತಿಗಳ ಕಡೆ ಹೋಗುವುದಕ್ಕಿಂತ ಈ ವಿಚಾರವನ್ನು ಇಲ್ಲಿಗೇ ತಣ್ಣಗೆ ಮಾಡಬೇಕೆಂದು ಯೋಚಿಸುತ್ತಾರೆ. ಅದು ತಪ್ಪೇನೂ ಅಲ್ಲ. ಆದರೆ ಇನ್ನೊಂದು ಕಡೆ ಇಂಥ ಘಟನೆ ಮರುಕಳಿಸಬಾರದು. ಕನ್ನಡನಾಡಿನಲ್ಲಿ ಕನ್ನಡ ಮಾತನಾಡಲಿಲ್ಲ ಎಂದರೆ ಸ್ವಲ್ಪ ಯೋಚಿಸಬೇಕಾದ ವಿಷಯ. ಇಲ್ಲಿ ಉರ್ದು ಮಾತನಾಡುವುದು ಕಡ್ಡಾಯ ಎಂದು ಯಾರೂ ಹೇಳಿಲ್ಲ. ಆ ಕಾರಣಕ್ಕೆ ಸಣ್ಣ ನೆಪಕ್ಕಾಗಿ ಹತ್ಯೆ ಮಾಡಿದ್ದು ಖಂಡನೀಯ. ಆರೋಪಿಗಳು ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದರೆಂಬ ಮಾಹಿತಿ ಲಭಿಸಿದೆ. ಘಟನೆಯ ಕುರಿತು ಸಮಗ್ರ ತನಿಖೆ ಅತ್ಯಗತ್ಯ ಎಂದರು.
Advertisement
Advertisement
ಪಕ್ಷದ ಕಡೆಯಿಂದ ರಾಜ್ಯಾಧ್ಯಕ್ಷರು ಕಳುಹಿಸಿದ 5 ಲಕ್ಷ ರೂಪಾಯಿ ನೆರವನ್ನು ಕೊಡಲಾಗುತ್ತಿದೆ. ಸರ್ಕಾರದ ಕಡೆಯಿಂದಲೂ ಸೂಕ್ತ ಪರಿಹಾರ ನೀಡಲು ಮುಖ್ಯಮಂತ್ರಿಯವರನ್ನು ಕೋರಲಾಗುವುದು. ಇದೊಂದು ದುರದೃಷ್ಟಕರ ಸಂಗತಿ. ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು ಎಂದು ಆಗ್ರಹಿಸಿದರು. ಡಿ.ಜಿ ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಹಿನ್ನೆಲೆಯಲ್ಲಿ ನಾವು ಸ್ವಲ್ಪ ಸಮಗ್ರವಾಗಿ ಆಲೋಚಿಸಬೇಕಿದೆ. ಯಾರಿಗೆ ಸಹಿಷ್ಣುತೆ ಇಲ್ಲ ಎಂಬುದನ್ನು ಡಿ.ಜಿ ಹಳ್ಳಿ, ಕೆ.ಜಿ.ಹಳ್ಳಿ ಘಟನೆ ಪುಷ್ಟೀಕರಿಸುತ್ತದೆ. ಶಾಸಕನಿಗೇ ರಕ್ಷಣೆ ಕೊಡಲಾಗದ ಪರಿಸ್ಥಿತಿ, ಜನಸಾಮಾನ್ಯನಿಗೆ ಇನ್ನು ಹೇಗೆ ರಕ್ಷಣೆ ಕೊಡಲು ಸಾಧ್ಯ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಿದೆ. ಸಣ್ಣ ಸಣ್ಣ ವಿಚಾರಕ್ಕೂ ಹಿಂಸಾಚಾರಕ್ಕೆ ಇಳಿಯುವುದೇಕೆ? ಅದರ ಹಿನ್ನೆಲೆ, ಪ್ರಚೋದನೆ ಬಗ್ಗೆಯೂ ಸಮಗ್ರ ತನಿಖೆ ಅಗತ್ಯವಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಕೋಮುದ್ವೇಷ ಕಕ್ಕುವುದು, ನನ್ನ ಹೆಸರು ಎಳೆದು ತರುವುದು ಸಿಟಿ ರವಿಗೆ ಮಾನಸಿಕ ರೋಗವಾಗಿದೆ: ಸಿದ್ದರಾಮಯ್ಯ
ಇದು ಪ್ರತ್ಯೇಕ ಘಟನೆಯೇ ಅಥವಾ ಕೋಮುಗಲಭೆಯ ಸಂಚು ಇದರ ಹಿಂದೆ ಇದೆಯೇ ಎಂಬುದರ ಕುರಿತು ಕೂಡ ಗೊತ್ತಾಗಬೇಕು. ಕೇವಲ ಸೀಮಿತ ದೃಷ್ಟಿಯಲ್ಲಿ ನೋಡದೆ ಸಮಗ್ರ ದೃಷ್ಟಿಕೋನದಿಂದ ತನಿಖೆ ಮಾಡಲು ಆಗ್ರಹಿಸುವುದಾಗಿ ತಿಳಿಸಿದರು. ಮಂಡ್ಯದ ಮುಸ್ಕಾನ್ ಘಟನೆಗೆ ಅಂತಾರಾಷ್ಟ್ರೀಯ ಭಯೋತ್ಪಾದಕರ ಪ್ರತಿಕ್ರಿಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತು ಭಾರತದ ನೆಲವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಕ್ಕೆ ಇಂತಹ ಪ್ರಯತ್ನ ನಡೆದಿದೆ. ಕೆಲವೆಡೆ ಯಶಸ್ಸನ್ನೂ ಕಂಡಿದ್ದಾರೆ. ಇಲ್ಲಿಂದ ಕೆಲವರು, ಕೇರಳ, ತಮಿಳುನಾಡಿನಿಂದ ಹಾಗೂ ಭಟ್ಕಳದಿಂದ ಐಸಿಸ್ ಸೇರುವುದಾದರೆ ಏನೋ ಒಂದು ಕಾರಣ ಇರಬೇಕಲ್ಲವೇ? ಇದರ ಹಿಂದಿನ ಸತ್ಯ ತಿಳಿಯುವುದು ಅನಿವಾರ್ಯ. ಇದನ್ನು ಬಳಸಲು ಅಲ್ ಖೈದಾ ಹವಣಿಸುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ
ಭಾರತದ ನೆಲವನ್ನು ಭಯೋತ್ಪಾದನೆಗೆ ಬಳಸಿಕೊಳ್ಳಲು ಬಿಜೆಪಿ ಅವಕಾಶ ಕೊಡುವುದಿಲ್ಲ. ಇಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಸರ್ಕಾರ ಇಲ್ಲ. ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲು ನಮಗೆ ಗೊತ್ತಿದೆ. ರಾಜ್ಯದ ಬೆಂಗಳೂರು, ಮಂಗಳೂರಿನಲ್ಲಿ ಎನ್‍ಐಎ ಠಾಣೆ ತೆರೆಯುವ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ತಾತ್ವಿಕವಾಗಿ ಒಪ್ಪಿಗೆ ಲಭಿಸಿ ಪ್ರಾರಂಭಿಸಿದ್ದಾರೆ. ಸಮಗ್ರವಾಗಿ ವ್ಯವಸ್ಥಿತವಾಗಿ ಅದು ಶೀಘ್ರವೇ ಆರಂಭವಾಗಲಿದೆ ಎಂದು ಅವರು ಉತ್ತರ ನೀಡಿದರು. ಇದನ್ನೂ ಓದಿ: ಗೌಡ್ರ ಮಕ್ಕಳು ಇನ್ನೂ ಬದುಕಿದ್ದಾರೆ, ಸ್ವಸ್ಥ ಸಮಾಜ ಕಟ್ಟುತ್ತೇವೆ: ಸಿಎಂ ಇಬ್ರಾಹಿಂ
ಯುನಿಫಾರ್ಮ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಆಕ್ಷೇಪಿಸಿ ಬಂದ್ ಕರೆ ಕೊಡುವುದು ಸಮಾಜ ಒಡೆಯುವ ಕೆಲಸ ತಾನೇ? ಸಿಎಎ ವಿಚಾರದಲ್ಲಿ ಭಾಷಣ ಮಾಡಿದವರು ಪರಮನೀಚರು. ಯಾವ್ಯಾವ ಪಕ್ಷದವರು ಹಾಗೂ ಬುದ್ಧಿಜೀವಿಗಳು ಭಾಷಣ ಮಾಡಿದ್ದಾರೆಂಬ ವಿಡಿಯೋ ಸಿಗುತ್ತದೆ. ಅವರು ದಡ್ಡರಾ? ಸಂವಿಧಾನ ಓದಿಲ್ಲವೇ? ಮಸೂದೆ ಓದಿಲ್ಲವೇ? ಎರಡು ವರ್ಷಗಳಲ್ಲಿ ಸಿಎಎ ಯಾರದಾದರೂ ಪೌರತ್ವ ಕಿತ್ತುಕೊಂಡಿದೆಯೇ ಎಂದು ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ಕೇಳಿದರು. ಇದನ್ನೂ ಓದಿ: ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ
ದೇಶದಲ್ಲಿ ಅರಾಜಕತೆ ಹುಟ್ಟು ಹಾಕುವುದೇ ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಹೊರಗಡೆಯಿಂದಲೂ ಧನಸಹಾಯ ಆಗುವ ಸಂಶಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. 1983ರಿಂದ ಯೂನಿಫಾರ್ಮ್ ಕಡ್ಡಾಯ ಇದೆ. ಆಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತೇ? ಇದ್ದಕ್ಕಿದ್ದಂತೆ ಹಿಜಬ್ ಹಿಡಿದುಕೊಂಡು ಯಾಕೆ ಬಂದರು? ಮಕ್ಕಳ ಮನಸ್ಸಿನಲ್ಲಿ ಜಾತಿಭೇದ ಇರಬಾರದು ಎಂಬ ಕಾರಣಕ್ಕೆ ಯೂನಿಫಾರ್ಮ್ ಕಡ್ಡಾಯಗೊಳಿಸಲಾಗಿತ್ತು ಎಂದು ವಿವರಿಸಿದರು. ಹಿಜಬ್ ಕುರಿತು ಮುಸ್ಲಿಂ ನ್ಯಾಯಮೂರ್ತಿಗಳೂ ಇದ್ದ ಹೈಕೋರ್ಟ್ ಪೀಠ ಸರ್ವಾನುಮತದ ತೀರ್ಪು ಕೊಟ್ಟಿದೆ. ಆಮೇಲೆ ಬಂದ್ ಕರೆ ಕೊಟ್ಟರು. ಈ ಥರದ ಜನ ಅಪಾಯಕಾರಿ. ಅವರಿಗೆ ಬೆಂಬಲ ಕೊಡುವವರು ಪರಮನೀಚರು ಎಂದು ವಾಗ್ದಾಳಿ ನಡೆಸಿದರು.
ನಮಗೆ ಬುದ್ಧಿ ಹೇಳುವ ಮೊದಲು ಆ ನೀಚತನದ ಕೆಲಸವನ್ನು ಅವರು ಬಿಡಬೇಕು ಎಂದು ಒತ್ತಾಯಿಸಿದರು. ಅದರ ಪರಿಣಾಮವಾಗಿ ಹರ್ಷ ಹಾಗೂ ಚಂದ್ರು ಕೊಲೆಯಾಗಿದೆ ಎಂದು ತಿಳಿಸಿದರು. ಇನ್ನೆಷ್ಟು ಬಲಿ ಬೇಕು? ತಮ್ಮ ಶಾಸಕನ ಮನೆಗೆ ಬೆಂಕಿ ಹಾಕಿದರೂ ಖಂಡಿಸುವ ಧೈರ್ಯ ಇರದ ನೀಚ ರಾಜಕಾರಣ ಮಾಡುವವರಿಂದ ಸಮಾಜ ಹಾಳಾಗುತ್ತಿದೆ. ಸತ್ಯ ಹೇಳುವ ನಮ್ಮಂಥವರಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಎನ್ ರವಿಕುಮಾರ್, ಸಂಸದರಾದ ಪಿ.ಸಿ. ಮೋಹನ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ. ಮಂಜುನಾಥ್ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್