ಪಾಕ್‌ ಹಿಂಸಾಚಾರಕ್ಕೆ ನಾಲ್ವರು ಸೈನಿಕರು ಸೇರಿ 5 ಸಾವು – ಸೇನೆಯಿಂದ ಕಂಡಲ್ಲಿ ಗುಂಡು ಆದೇಶ

Public TV
1 Min Read
5 Killed As Thousands Of Imran Khans Supporters Clash With Cops In Pakistan

ಇಸ್ಲಾಮಾಬಾದ್‌: ಜೈಲಿನಲ್ಲಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಬಿಡುಗಡೆಗೆ ಒತ್ತಾಯಿಸಿ ನಡೆದ ಪ್ರತಿಭಟನೆ (Protest) ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರೊಡನೆ ನಡೆದ ಘರ್ಷಣೆಯಲ್ಲಿ ನಾಲ್ವರು ಸೈನಿಕರು ಹಾಗೂ ಓರ್ವ ಪ್ರತಿಭಟನಾಕಾರ ಸಾವಿಗೀಡಾಗಿದ್ದಾನೆ. ಈ ಘಟನೆಯ ಬಳಿಕ ಪಾಕಿಸ್ತಾನದ ಸೇನೆ ʻಕಂಡಲ್ಲಿ ಗುಂಡುʼ ಆದೇಶ ಹೊರಡಿಸಿದೆ.

imran khan

ಇಮ್ರಾನ್ ಖಾನ್ ಬೆಂಬಲಿಗರು ವಿವಿಧೆಡೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸುತ್ತ ಸೋಮವಾರ ರಾಜಧಾನಿ ಇಸ್ಲಾಮಾಬಾದ್‌ ಪ್ರವೇಶಿಸಿದ್ದಾರೆ. ಈ ವೇಳೆ ಪ್ರತಿಭಟನಾ ಮೆರವಣಿಗೆ ಹಿಂಸಚಾರಕ್ಕೆ ತಿರುಗಿದ್ದು, ಪೊಲೀಸರು, ಸೇನೆ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ 4 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ, ಪಂಜಾಬ್ ಮತ್ತು ಇಸ್ಲಾಮಾಬಾದ್‌ನಲ್ಲಿ ಪೊಲೀಸರು 3,500 ಕ್ಕೂ ಹೆಚ್ಚು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಹೇಳಿದೆ.

ಇಮ್ರಾನ್‌ ಖಾನ್ ಅವರ ಕರೆಕೊಟ್ಟ ಬೆನ್ನಲ್ಲೇ ನ.24ರಿಂದ ಪ್ರತಿಭಟನೆ ಆರಂಭವಾಗಿತ್ತು. ಅವರ ವಿರುದ್ಧದ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಾಮೀನು ನೀಡಿದೆ. ಶಿಕ್ಷೆಯನ್ನು ಅಮಾನತುಗೊಳಿಸಿದೆ. ಆದರೂ ಅವರು ಬಂಧನದಲ್ಲಿಯೇ ಇದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ, ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಅಧಿಕಾರದ ದುರುಪಯೋಗ ಸೇರಿದಂತೆ ಸುಮಾರು 150 ಪ್ರಕರಣಗಳು ದಾಖಲಾಗಿವೆ.

Share This Article