ಚೆನ್ನೈ: ಮೊಬೈಲ್ ಕಳ್ಳತನ ಮಾಡಿದಳು ಅಂತಾ ಅಪ್ರಾಪ್ತ ಬಾಲಕಿಯನ್ನು ಮರಕ್ಕೆ ಕಟ್ಟಿ, ಲೈಂಗಿಕ ಕಿರುಕುಳ ನೀಡಿ ಕಬ್ಬಿಣ ರಾಡ್‍ನಿಂದ ಬರೆ ಹಾಕಿದ ಅಮಾನವೀಯ ಘಟನೆ ತಮಿಳುನಾಡಿನ ತಿರುವೈಯರು ಜಿಲ್ಲೆಯಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದ ಬಾಲಕಿ 14 ವರ್ಷದವಳಾಗಿದ್ದು, ಅರ್ಧಕ್ಕೆ ವ್ಯಾಸಂಗ ನಿಲ್ಲಿಸಿದ್ದಳು. 16 ವರ್ಷದ ಬಾಲಕ ಸೇರಿದಂತೆ ಒಟ್ಟು 5 ಜನರು ಕೃತ್ಯ ಎಸಗಿದ್ದು, ಕುಡಿತಂಗಿ ನಿವಾಸಿ ಬಾಲಕ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದದ್ದು ಏನು?:
ಎಂ.ಕನ್ನಾ ಹಾಗೂ ಎಂ.ಮಹೇಂದ್ರನ್ ಸಹೋದರರ ಮನೆಯಲ್ಲಿ ಸಂತ್ರಸ್ತ ಬಾಲಕಿ ಮೊಬೈಲ್ ಕಳ್ಳತನ ಮಾಡಿದ್ದಾಳೆ. ಹೀಗಾಗಿ ಬಾಲಕಿಯನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ, ಆಕೆಯ ಮೇಲೆ ಸಹೋದರರು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಎಸ್.ಶಿವಕುಮಾರ್, ಒಬ್ಬ ಬಾಲಕ ಹಾಗೂ ಸ್ಥಳೀಯ ಮಹಿಳೆ ವಿದ್ಯಾ ಎಂಬವರು ಕನ್ನಾ ಸಹೋದರರ ಜೊತೆಗೂಡಿದ್ದಾರೆ. ಬಳಿಕ ಮರಕ್ಕೆ ಕಟ್ಟಿಹಾಕಿದ್ದ ಬಾಲಕಿಗೆ ಕಬ್ಬಿಣದ ರಾಡ್‍ನಿಂದ ಬರೆ ಹಾಕಿದ್ದಾರೆ. ದುಷ್ಕರ್ಮಿಗಳ ಹಿಂಸೆ ತಾಳಲಾರದೇ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಬಾಳೆ ತೋಟದಲ್ಲಿ ಬಚ್ಚಿಕೊಂಡಿದ್ದಾಳೆ. ಕೆಲಹೊತ್ತು ಕಾಲ ಕಳೆದು, ಬಳಿಕ ಮನೆ ಸೇರಿದ್ದಾಳೆ.
ತನ್ನ ಮೇಲಾದ ಹಲ್ಲೆ ಹಾಗೂ ಲೈಂಗಿಕ ಕಿರುಕುಳ ಕುರಿತು ಬಾಲಕಿ ತನ್ನ ತಂದೆ ಮುಂದೆ ಹೇಳಿಕೊಂಡಿದ್ದಾಳೆ. ಅಸ್ವಸ್ಥಗೊಂಡಿದ್ದ ಸಂತ್ರಸ್ತ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಕುರಿತು ಬಾಲಕಿಯ ತಂದೆ ತಿರುವೈಯರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು, ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv