ತಲೆಗೂದಲು ತುಂಬಾ ನಯವಾಗಿರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆಯಾಗಿರುತ್ತೆ. ಹೀರೋಯಿನ್ಗಳ ಸಾಫ್ಟ್&ಸ್ಲೀಕ್ ಕೂದಲು ನೋಡಿದಾಗ ಅಯ್ಯೋ ಅಂಥ ಕೂದಲು ನಮಗಿಲ್ವಲ್ಲಾ ಅಂತಾನೂ ಅನ್ನಿಸುತ್ತೆ. ಅದಕ್ಕೆಲ್ಲಾ ಹಣ ಖರ್ಚು ಮಾಡ್ಬೇಕು ಅಂತ ವರಿ ಮಾಡ್ಬೇಡಿ. ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್ ಕೂದಲು ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕೆ ಸ್ವಲ್ಪ ಸಮಯ ಮೀಸಲಿಡಬೇಕು ಅಷ್ಟೇ. ಆ ಟಿಪ್ಸ್ ಇಲ್ಲಿದೆ ನೋಡಿ
Advertisement
1. ಗುಲಾಬಿ ದಳ- ಕೊಬ್ಬರಿ ಎಣ್ಣೆ
ಗುಲಾಬಿಯನ್ನ ಅಲಂಕಾರಕ್ಕೆ, ಮುಡಿದುಕೊಳ್ಳೋಕೆ ಬಳಸೋ ಜೊತೆಗೆ ಅದರಿಂದ ನಿಮ್ಮ ಕೂದಲ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇದಕ್ಕೆ ನೀವು ಕಷ್ಟನೂ ಪಡಬೇಕಿಲ್ಲ. ತಲೆಗೆ ಎಣ್ಣೆ ಹಚ್ಚುವಾಗೆಲ್ಲಾ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಕೊಬ್ಬರಿ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ(ಸ್ವಲ್ಪ ಬಿಸಿಯಾದ್ರೆ ಸಾಕು, ಹೊಗೆ ಬರುವಂತೆ ಕಾಯಿಸಬಾರದು) ಅದಕ್ಕೆ ಗುಲಾಬಿ ದಳಗಳನ್ನ ಹಾಕಿ. ಹೀಗೆ ಮಾಡಿದಾಗ ನೊರೆ ಬರುತ್ತದೆ. ಎಣ್ಣೆ ತಣ್ಣಗಾದ ನಂತರ ಗುಲಾಬಿ ದಳಗಳನ್ನ ಕಿವುಚಿ ತೆಗೆಯಿರಿ. ನಂತರ ಎಣ್ಣೆಯನ್ನ ತಲೆಗೆ ಸಂಪೂರ್ಣವಾಗಿ ಹಚ್ಚಿ ಮಸಾಜ್ ಮಾಡಿ. 3 ಗಂಟೆಗಳ ನಂತರ ಸ್ನಾನ ಮಾಡಬಹುದು. ಅಥವಾ ರಾತ್ರಿ ಎಣ್ಣೆ ಹಚ್ಚಿಕೊಂಡು ಬೆಳಿಗ್ಗೆ ತಲೆಗೆ ಸ್ನಾನ ಮಾಡಬಹುದು.
Advertisement
Advertisement
2. ಮೆಹೆಂದಿ
ಬಿಳಿ ಕೂದಲು ಬಂದಿದ್ರೆ ಮಾತ್ರ ತಲೆಗೆ ಮೆಹೆಂದಿ ಹಚ್ಚಬೇಕು ಅಂತೇನಿಲ್ಲ. ರಾಜ ಮಹಾರಾಜರ ಕಾಲದಿಂದ್ಲೂ ಮೆಹೆಂದಿ ಕೂದಲ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ನಿಮ್ಮ ಕೂದಲಿಗೆ ನ್ಯಾಚುರಲ್ ಕಂಡೀಷನರ್. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ಉದ್ದ ಕೂದಲು ಪಡೆಯಲು ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುವಾಗ ಟೀ ಪುಡಿ ಮತ್ತು 5-6 ಲವಂಗ ಹಾಕಿ ಡಿಕಾಕ್ಷನ್ ತಯಾರಿಸಿಕೊಳ್ಳಿ. ತಣ್ಣಗಾದ ನಂತರ ಮೆಹೆಂದಿ ಪುಡಿ, ಸ್ವಲ್ಪ ಮೊಸರು/ ನಿಂಬೆಹಣ್ಣು ಹಾಕಿ ಮಿಕ್ಸ್ ಮಾಡಿ 3 ಗಂಟೆ ನೆನೆಯಲು ಬಿಡಿ(ಇಡೀ ರಾತ್ರಿ ಇಟ್ಟು ಬೆಳಿಗ್ಗೆ ಹಚ್ಚಬಹುದು). ನಂತರ ಕೂದಲಿಗೆ ಸಂಪೂರ್ಣವಾಗಿ ಮೆಹೆಂದಿ ಹಚ್ಚಿ 1/2 ಗಂಟೆ ಒಣಗಲು ಬಿಡಿ. ಕೂದಲಿಗೆ ಬಣ್ಣ ಬೇಕಾದರೆ 1 ಗಂಟೆ ಬಿಡಬಹುದು. ಕೂದಲು ಸಾಫ್ಟ್ ಆದ್ರೆ ಸಾಕು ಅಂತಿದ್ರೆ ಅರ್ಧ ಗಂಟೆ ಬಳಿಕ ಸ್ನಾನ ಮಾಡಿ.
Advertisement
3. ಬಾಳೇಹಣ್ಣು- ಬಾದಾಮಿ ಎಣ್ಣೆ
ಚೆನ್ನಾಗಿ ಕಳಿತ ಬಾಳೇಹಣ್ಣನ್ನು ರುಬ್ಬಿಕೊಂಡು ಅದಕ್ಕೆ 2 ಚಮಚ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ ತಲೆಗೆ ಪ್ಯಾಕ್ ಹಾಕಿಕೊಳ್ಳಿ. ಒಂದು ಗಂಟೆಯ ನಂತರ ಸ್ನಾನ ಮಾಡಿ. ಕೂದಲು ತೊಳೆಯುವಾಗ ಬಾಳೆಹಣ್ಣಿನ ಅಂಶ ಸಂಪೂರ್ಣವಾಗಿ ಹೋಗುವಂತೆ ತೊಳೆಯಿರಿ. ಸ್ವಲ್ಪ ಸ್ವಲ್ಪ ಕೂದಲಿನಲ್ಲೇ ಇದ್ದರೆ ಚಿಂತೆ ಬೇಡ, ಕೂದಲು ಒಣಗಿದ ನಂತರ ಅದೆಲ್ಲಾ ಉದುರಿ ಹೋಗುತ್ತದೆ.
4. ಆಲೋವೆರಾ
ಆಲೋವೆರಾವನ್ನ ಮುಖಕ್ಕೆ, ಕೈ-ಕಾಲಿಗೆ ಹಾಗೇ ತಲೆಗೂದಲಿಗೂ ಬಳಸಬಹುದು. ಆಲೋವೆರಾದ ಸಿಪ್ಪೆ ತೆಗೆದು ಅದರ ತಿರುಳನ್ನ ತೆಗೆದು ರುಬ್ಬಿಕೊಳ್ಳಿ. ನಂತರ ತಲೆಗೆ ಪ್ಯಾಕ್ ಹಾಕಿ ಒಂದು ಗಂಟೆಯ ನಂತರ ಸ್ನಾನ ಮಾಡಿ. ಆಲೋವೆರಾ ಬದಲು ಆಲೋವೆರಾ ಜೆಲ್ ಕೂಡ ಬಳಸಬಹುದು. ಆದ್ರೆ ನೈಸರ್ಗಿಕವಾದ್ದದಾದ್ರೆ ಉತ್ತಮ.
5. ಮೊಟ್ಟೆ
ಒಂದು ಪಾತ್ರೆಗೆ ಎರಡು ಮೊಟ್ಟೆ ಒಡೆದು ಹಾಕಿ ಅದಕ್ಕೆ ಅರ್ಧ ಹೋಳು ನಿಂಬೆಹಣ್ಣು ಹಿಂಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನ ತಲೆಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿ. ಮೊಟ್ಟೆಯ ಹಸಿವಾಸನೆ ಸಹಿಸಲು ಆಗಲ್ಲ ಎಂದಾದ್ರೆ ಸ್ವಲ್ಪ ಕರ್ಪೂರವನ್ನ ಪುಡಿ ಮಾಡಿ ಬೆರೆಸಿಕೊಳ್ಳಿ. ಸಂಪೂರ್ಣವಾಗಿ ಹಸಿವಾಸನೆ ಹೋಗುವುದಿಲ್ಲ. ಆದ್ರೂ ಸ್ವಲ್ಪ ಮಟ್ಟಿಗಾದ್ರೂ ಅದರಿಂದ ಮುಕ್ತಿ ಸಿಗುತ್ತದೆ.
ಇನ್ನು ಪ್ರತಿ ಸಲ ಹೇಳುವಂತೆ ಈ ಎಲ್ಲಾ ಟಿಪ್ಸ್ಗಳನ್ನ ನಿಯಮಿತವಾಗಿ ಬಳಸೋದ್ರಿಂದ ಮಾತ್ರ ಉತ್ತಮ ಫಲಿತಾಂಶ ಸಿಗೋದು.