ಬೆಂಗಳೂರು: ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಶುಕ್ರವಾರದಿಂದ ಆರಂಭವಾಗಲಿದೆ. ರಾಜ್ಯದ ನೂರಾರು ಹಳ್ಳಿಗಳು ಸಿಎಂ ಅವರ ಗ್ರಾಮ ವಾಸ್ತವ್ಯವನ್ನು ಎದುರು ನೋಡುತ್ತಿವೆ. ಕೆಲವು ಗ್ರಾಮಗಳು ಕನಿಷ್ಟ ಮೂಲ ಸೌಕರ್ಯ ಕಾಣದೇ ಸೊರಗುತ್ತಿವೆ. ಇಂತಹ ಶೋಚನೀಯ ಸ್ಥಿತಿಯಲ್ಲಿರೋ ಗ್ರಾಮಗಳ ಮೇಲೆ ಪಬ್ಲಿಕ್ ಟಿವಿಯಿಂದ ಬೆಳಕು ಚೆಲ್ಲೋ ಪ್ರಯತ್ನ ಮಾಡಿದ್ದು, ಗ್ರಾಮಗಳ ಒಳ ಹೊಕ್ಕಿ ಅಸಲಿ ಚಿತ್ರಣವನ್ನು ಬಯಲಿಗೆಳೆದಿದೆ.
ಮುಖ್ಯಮಂತ್ರಿಗಳು ನಮ್ಮ ಹಳ್ಳಿಗೂ ಬಂದ್ರೆ ಊರು ಉದ್ಧಾರವಾಗುತ್ತದೆ ಅನ್ನೋ ಸಣ್ಣ ಆಸೆ ಈ ಗ್ರಾಮಸ್ಥರದ್ದಾಗಿದೆ. ಹೀಗಾಗಿ ಸದ್ಯ ಐದು ಹಳ್ಳಿಗಳ ದಾರುಣ ಸ್ಥಿತಿಯ ಬಗ್ಗೆ ಇಲ್ಲಿ ತಿಳಿಸಲಾಗಿದೆ.
Advertisement
Advertisement
ಚಾಮರಾಜನಗರದ ದೊಡ್ಡಾಣೆ:
ರಾಜ್ಯದಲ್ಲಿ ಧಾರ್ಮಿಕತೆ ಮತ್ತು ಅನೇಕ ಪವಾಡಗಳಿಗೆ ಹೆಸರಾದ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರಬೆಟ್ಟ ಎಲ್ಲಾ ಜನರನ್ನು ತನ್ನತ್ತ ಸೆಳೆಯುತ್ತದೆ. ಆದರೆ ಈ ಬೆಟ್ಟದ ತಪ್ಪಲಿನಲ್ಲಿರುವ ದೊಡ್ಡಾಣೆ ಎಂಬ ಗ್ರಾಮ ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಈ ಗ್ರಾಮಕ್ಕೆ ಹೋಗಬೇಕು ಅಂದರೆ 5 ಕಿ.ಮೀ ಕಾಡಿನ ಕಲ್ಲು ಮುಳ್ಳು ದಾರಿಯಲ್ಲಿ ನಡೆದುಕೊಂಡು ಹೋಗಬೇಕು. ಯಾರಿಗಾದರು ಕಾಯಿಲೆ ಅಥವಾ ಹೆರಿಗೆ ನೋವು ಕಾಣಿಸಿಕೊಂಡರೆ ಅವರನ್ನು ಡೋಲಿ ಕಟ್ಟಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
Advertisement
Advertisement
ಈ ಗ್ರಾಮದಲ್ಲಿ ರಸ್ತೆ ಮಾತ್ರವಲ್ಲ, ಕುಡಿಯುವ ನೀರು ಸಹ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಕಾಡಿನ ಮಧ್ಯ ಭಾಗದಲ್ಲಿ ಇರುವ ಹಳ್ಳ ಕೊಳ್ಳಗಳ ನೀರನ್ನು ಸೋಸಿ ಕುಡಿಯುವ ಸ್ಥಿತಿ. ಇಲ್ಲಿನ ಮಕ್ಕಳು ಓದಲು ಸಹ ಒಂದು ಪ್ರಾಥಮಿಕ ಶಾಲೆಯೂ ಸಹ ಇಲ್ಲ. ಈ ಗ್ರಾಮದಲ್ಲಿ ಹೈಸ್ಕೂಲ್ ಓದಿರುವ ಒಬ್ಬನನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಇಲ್ಲಿನ ಜನರು ಅರಣ್ಯ ರೋಧನೆ ಪಡುತ್ತಿದ್ದಾರೆ ಎಂದು ಗ್ರಾಮಸ್ಥ ಮಹದೇವ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಧಾರವಾಡದ ಕೊಂಗವಾಡ:
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕೊಂಗವಾಡ ಗ್ರಾಮದಲ್ಲಿ ಮನುಷ್ಯರಿಗೂ ಜಾನುವಾರುಗಳಿಗೂ ವ್ಯತ್ಯಾಸವೇ ಇಲ್ಲ. ಮನುಷ್ಯರು ಹಾಗೂ ಪ್ರಾಣಿಗಳಿಗೆ ಒಂದು ಕೆರೆಯ ನೀರೇ ಜೀವಾಳ. ದನಗಳು ಕುಡಿಯೋ ನೀರನ್ನೇ ನಾವೂ ಕುಡಿಯುತ್ತೇವೆ. ಕೆರೆಯನ್ನಾದರೂ ಸ್ವಚ್ಛಗೊಳಿಸಿ ಎಂದರೆ ಗ್ರಾಮ ಪಂಚಾಯ್ತಿಯವರು ಅದನ್ನೂ ಮಾಡಿಲ್ಲ. ನಾವು ಮನುಷ್ಯರೇ ಅಲ್ವಾ? ನಮ್ಮ ಸಮಸ್ಯೆಯನ್ನೇಕೆ ಇವರು ಕೇಳುತ್ತಿಲ್ಲ? ಎಂದು ಜನರು ಅಳಲು ತೋಡಿಕೊಂಡಿದ್ದಾರೆ.
ಈ ಗ್ರಾಮ ಬೆಣ್ಣಿ ಹಳ್ಳ ಪಕ್ಕದಲ್ಲಿದ್ದು ಪ್ರತಿವರ್ಷ ಪ್ರವಾಹಕ್ಕೊಳಗಾಗುತ್ತಿತ್ತು. ಪ್ರವಾಹ ಬಂದರೆ ಇಡೀ ಊರೇ ಜಲಾವೃತವಾಗುತ್ತಿತ್ತು. ಈ ಗ್ರಾಮದ ಸ್ಥಿತಿ ಕಂಡ ಆಗಿನ ರಾಜ್ಯ ಸರ್ಕಾರ 2009ರಲ್ಲಿ ಗ್ರಾಮವನ್ನು ಸ್ಥಳಾಂತರ ಮಾಡಿತ್ತು. ಆದರೆ ಮೂಲಭೂತ ಸೌಲಭ್ಯ ಇಲ್ಲದ ಕಾರಣ ಜನ ಅಲ್ಲಿಗೆ ಹೋಗಲೇ ಇಲ್ಲ. 2012ರ ನಂತರ ಈ ಊರಿನತ್ತ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಿರುಗಿ ಕೂಡ ನೋಡಿಲ್ಲ. ಸುಮಾರು 3 ಸಾವಿರಕ್ಕೂ ಅಧಿಕ ಜನ ಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯವೂ ಇಲ್ಲ. ಶಾಲಾ ಮಕ್ಕಳು ಕಾಲೇಜು ವಿಧ್ಯಾರ್ಥಿಗಳು ಸುಮಾರು ಮೂರು ಕೀ.ಮೀ ದೂರ ನಡೆದುಕೊಂಡು ಬರಬೇಕಾದ ಸ್ಥಿತಿ, ಹೀಗಿದ್ರೂ ಜನ ಪ್ರತಿನಿಧಿಗಳು ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥ ಬಸವರಾಜ್ ತಿಳಿಸಿದ್ದಾರೆ.
ಹಾವೇರಿಯ ಗೌಳೇರದಡ್ಡಿ:
ಜಿಲ್ಲೆಯ ಶಿಗ್ಗಾಂವ ತಾಲೂಕಿನ ಜೊಂಡಲಗಟ್ಟಿಯ ಗೌಳೇರದಡ್ಡಿಯಲ್ಲಿ ಗೌಳಿ ಸಮುದಾಯದ 25 ಕುಟುಂಬಗಳಿವೆ. ಇಲ್ಲಿಯ ಜನರಿಗೆ ಹೈನುಗಾರಿಕೆಯೇ ಜೀವನಾಧಾರ, ನಿತ್ಯ ನಗರದ ಜನರಿಗೆ ಹಾಲು ಕೊಡೋ ಈ ಗೌಳೇರದಡ್ಡಿಯ ಜನರಿಗೆ ಮಾತ್ರ ಕುಡಿಯೋಕೆ ನೀರಿಲ್ಲ.
ಗ್ರಾಮದ 80ಕ್ಕೂ ಹೆಚ್ಚು ಜನರ ಬಳಿ ವೋಟರ್ ಐಡಿ. ರೇಷನ್ ಕಾರ್ಡ್ ಇದ್ದರೂ ಸರ್ಕಾರಿ ಸೌಲಭ್ಯಗಳು ಸಿಗೋದು ಮಾತ್ರ ಅಷ್ಟಕಷ್ಟೆ. ರಸ್ತೆ ಇಲ್ಲದಿರುವುದರಿಂದ ಬಸ್ ಬಂದ ಉದಾಹರಣೆಗಳಿಲ್ಲ. ಗೌಳೇರದಡ್ಡಿಯಲ್ಲಿ ಪ್ರಾಥಮಿಕ ಶಾಲೆ ಸಹ ಇಲ್ಲದ ಪರಿಣಾಮ 5-6 ಕಿಲೋ ಮೀಟರ್ ದೂರದಲ್ಲಿನ ನ್ಯಾಸರಗಿ-ಮುಂಡಗೋಡದ ಶಾಲೆಗೆ ಜೀವ ಕೈಯಲ್ಲಿ ಹಿಡಿದು ಹೋಗಬೇಕು. ಯಾಕಂದರೆ ಮಕ್ಕಳಿಗೆ ಕರಡಿ ಕಾಟ ಬೇರೆ. ಹೀಗಾಗಿ ಗ್ರಾಮದಲ್ಲಿನ ಮಕ್ಕಳು ಶಾಲೆ ಕಲಿಯೋದನ್ನ ಬಿಟ್ಟು ದನಾ ಕಾಯೋ ಕಾಯಕ ಮುಂದಾಗಿದ್ದಾರೆ. ಅಲ್ಲದೆ ಅರಣ್ಯ ಪ್ರದೇಶದಲ್ಲಿರೋ ಇಲ್ಲಿನ ಜನರನ್ನ ಆಗಾಗ ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ಮುಂದಾಗುತ್ತಿರುವುದು ಗ್ರಾಮಸ್ಥರನ್ನ ಕಂಗೆಡಿಸಿದೆ.
ಮಂಡ್ಯದ ಅನಂತಹಳ್ಳಿ:
ಮುಖ್ಯಮಂತ್ರಿಗಳ ಅಚ್ಚು ಮೆಚ್ಚಿನ ಜಿಲ್ಲೆಯಾಗಿರುವ ಮಂಡ್ಯದಲ್ಲಿ ಜೀವ ನದಿ ಕಾವೇರಿ ಹರಿಯುತ್ತದೆ. ಈ ಕಾವೇರಿ ಪಕ್ಕದಲ್ಲೇ ಅಂತನಹಳ್ಳಿ ಅನ್ನೋ ಊರಿದೆ. ಈ ಹಳ್ಳಿಯ ಜನ ಬೇರೆ ಊರಿಗೆ ಹೋಗಬೇಕು ಅಂದರೆ ನಾಲ್ಕು ಕಿಲೋ ಮೀಟರ್ ದೂರ ನಡೆದುಕೊಂಡೇ ಹೋಗಬೇಕು.
ಕೆಆರ್‍ಎಸ್ ಜಲಾಶಯ ನಿರ್ಮಾಣಗೊಂಡ ನಂತರ ಇಡೀ ಊರೇ ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ಗ್ರಾಮಸ್ಥರೆಲ್ಲರೂ 10 ಕಿ.ಮೀ. ಪ್ರದೇಶಕ್ಕೆ ಸ್ಥಳಾಂತರಗೊಂಡರು. ಹುಟ್ಟಿ ಬೆಳೆದ ಊರಿನ್ನೇ ಬಿಟ್ಟು ಹೋದ ಗ್ರಾಮಸ್ಥರು `ಅಂತನಹಳ್ಳಿ’ ಗ್ರಾಮದಲ್ಲಿ ನೆಲೆ ನಿಂತರು. ಹೊಸ ಊರು ಸೃಷ್ಟಿಯಾಗಿ ಹತ್ತಿರ ಹತ್ತಿರ ನೂರು ವರ್ಷ ಕಳೆದಿದೆ. 300ಕ್ಕೂ ಹೆಚ್ಚು ಮನೆಗಳು ಹಾಗೂ 1000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಅಂತನಹಳ್ಳಿಯಲ್ಲಿ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂದು ಗ್ರಾಮಸ್ಥ ಮಹದೇವಪ್ಪ ತಿಳಿಸಿದ್ದಾರೆ.
ಈ ಗ್ರಾಮದಲ್ಲಿ ಇಲ್ಲಿ ಪ್ರೌಢ ಶಾಲೆ ಇಲ್ಲ. ಇರೋ ಪ್ರಾಥಮಿಕ ಶಾಲೆ ಹಾಳಾಗಿದೆ. ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳ ತ್ಯಾಜ್ಯ ಅಥವಾ ಕಲುಷಿತ ನೀರು ರಸ್ತೆಗಳಲ್ಲೇ ಹರಿಯುತ್ತದೆ. ಇದರಿಂದ ನಾನಾ ರೋಗಿಗಳಿಗೆ ತುತ್ತಾಗಿ ಆಸ್ಪತ್ರೆಗೆ ಹೋಗಲೂ ಪ್ರಾಥಮಿಕ ಚಿಕಿತ್ಸಾ ಕೇಂದ್ರವಿಲ್ಲ. ಆರೋಗ್ಯ ಕೆಟ್ಟರೆ ಬನ್ನಂಗಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಬೇಕು. ಇಲ್ಲ ತಾಲೂಕಾಸ್ಪತ್ರೆ, ಮೈಸೂರಿಗೆ ಹೋಗಬೇಕು. ಹೀಗಾಗಿ ಇಲ್ಲಿ ಜನರ ಪಾಡು ದೇವರಿಗೇ ಪ್ರೀತಿ ಎಂದು ಗ್ರಾಮಸ್ಥ ಚಂದ್ರಶೇಖರ್ ಹೇಳುತ್ತಾರೆ.
ರಾಯಚೂರಿನ ಅರಳಪ್ಪನ ಹುಡಾ:
ರಾಯಚೂರಿನ ಅರಳಪ್ಪನ ಹುಡಾ ಗ್ರಾಮದಲ್ಲಿ ನಿತ್ಯ ಕುಡಿಯೋ ನೀರಿಗಾಗಿ ಕಿತ್ತಾಟ. ಕಿತ್ತಾಡಿದ್ರೆ ಮಾತ್ರ ಇಲ್ಲಿ ಜೀವಜಲ ಸಿಗುತ್ತದೆ. ಇಲ್ಲದಿದ್ದರೆ 4 ಕಿಲೋ ಮೀಟರ್ ದೂರದ ಹಳ್ಳದ ನೀರು ಕುಡಿಯೋ ಪರಿಸ್ಥಿತಿ. 450 ಜನ ವಾಸಿಸೋ 50 ಮನೆಗಳಿರೋ ಅರಳಪ್ಪನ ಹುಡಾ ಗ್ರಾಮದ ಸಮಸ್ಯೆ ಒಂದಲ್ಲ ಎರಡಲ್ಲ. ರಸ್ತೆ-ನೀರಿಲ್ಲದ ಈ ಊರಿನ ಯುವಕರಿಗೆ ಹೆಣ್ಣು ಕೊಡಲು ಹಿಂದೆ-ಮುಂದೆ ನೋಡ್ತಾರಂತೆ. ಹೀಗಾಗಿಯೇ ನಮ್ಮೂರಿಗೆ ನೀವು ಬನ್ನಿ ಸ್ವಾಮಿ ಎಂದು ಗ್ರಾಮಸ್ಥರು ಸಿಎಂಗೆ ಗ್ರಾಮ ವಾಸ್ತವ್ಯಕ್ಕೆ ಆಹ್ವಾನ ಮಾಡುತ್ತಿದ್ದಾರೆ.
ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ. ಊರಲ್ಲಿ ಆಸ್ಪತ್ರೆಯೂ ಇಲ್ಲ. ರಸ್ತೆ ಹದಗೆಟ್ಟಿರುವುದರಿಂದ ವೃದ್ಧರು-ಗರ್ಭಿಣಿಯರು ಆಸ್ಪತ್ರೆಗೆ ಹೋಗೋಕೆ ಅಂಬುಲೆನ್ಸ್ ಕೂಡ ಬರಲ್ಲ. ಟಂಟಂನಲ್ಲೆ ಆಸ್ಪತ್ರೆಗೆ ಹೋಗೋ ಪರಿಸ್ಥಿತಿ ಈ ಗ್ರಾಮಸ್ಥರದ್ದಾಗಿದೆ. ಅಲ್ಲದೆ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿದ್ದರೂ ಅವು ಬಿಳೋ ಸ್ಥಿತಿಯಲ್ಲಿದ್ದು, ಮಕ್ಕಳು ಶಾಲೆಗೆ ಬರೋಕೆ ಹೆದರುತ್ತಾರೆ ಎಂದು ಗ್ರಾಮಸ್ಥ ಮೆಹಬೂಬ್ ಅಲಿ ಹೇಳಿದ್ದಾರೆ.
ಒಟ್ಟಿನಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಈ 5 ಗ್ರಾಮಗಳಲ್ಲಿದ್ದು, ಸಿಎಂ ಅವರು ನಮ್ಮ ಗ್ರಾಮಕ್ಕೂ ಬಂದರೆ ಸ್ವಲ್ಪ ಮಟ್ಟಿಗಾದ್ರು ಗ್ರಾಮ ಅಭಿವೃದ್ಧಿಯಾಗಬಹುದೆಂಬುದು ಇಲ್ಲಿಯ ಗ್ರಾಮಸ್ಥರ ನಂಬಿಕೆಯಾಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]