Bengaluru City
ಸೂರ್ಯ ಶಿಕಾರಿಗೆ ಮಹಾರಾಷ್ಟ್ರದಲ್ಲಿ ಐವರು ಬಲಿ

ನವದೆಹಲಿ/ಬೆಂಗಳೂರು: ದೇಶಾದ್ಯಂತ ಸೂರ್ಯ ಶಿಕಾರಿ ಜೋರಾಗಿದೆ. ಬಿಸಿಲಿನ ತಾಪಕ್ಕೆ ಜನ ತತ್ತರಿಸಿ ಹೋಗಿದ್ದಾರೆ.
ಮಾರ್ಚ್ ತಿಂಗಳಲ್ಲೇ ಮಹಾರಾಷ್ಟ್ರದಲ್ಲಿ 40 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದ್ದು, ಬಿಸಿ ತಾಳಲಾರದೆ ವಿವಿಧೆಡೆ ಐವರು ಸಾವನ್ನಪ್ಪಿದ್ದಾರೆ. ಅದ್ರಲ್ಲೂ, ರಾಯಘಡ ಜಿಲ್ಲೆಯ ಭೀರಾ ಗ್ರಾಮದಲ್ಲಿ 46.5 ಡಿಗ್ರಿ ಸೆಲ್ಸಿಯಸ್ ದಾಖಲೆಯ ಉಷ್ಣಾಂಶ ದಾಖಲಾಗಿದೆ. ಹೀಗಾಗಿ, ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಅಧ್ಯಯನ ನಡೆಸ್ತಿದೆ.
ರಾಜಸ್ತಾನದ ಬಾರ್ಮೆರ್ ನಲ್ಲಿ 43.4 ಡಿಗ್ರಿ ಸೆಲ್ಸಿಯಸ್, ಹರ್ಯಾಣದ ನಾರ್ನೌಲ್ ನಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಪಂಜಾಬ್ ನ ಲೂಧಿಯಾನಾದಲ್ಲಿ ಕನಿಷ್ಠ ತಾಪಕ್ಕಿಂತ 7 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿರುವುದಾಗಿ ಹೇಳಿದೆ.
ರಾಜ್ಯದಲ್ಲೂ ಬಿಸಿಲಿನ ಝಳ ಹೆಚ್ಚಾಗ್ತಿದೆ. ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದ್ದು, ಇನ್ನೆರಡು ದಿನಗಳಲ್ಲಿ 38 ಡಿಗ್ರಿಗೆ ಏರಲಿದೆ ಎನ್ನಲಾಗಿದೆ. ಬಿಸಿಲ ಬೇಗೆ ಹೆಚ್ಚಾದ ಕಾರಣ ಹೈದರಾಬಾದ್ ಕರ್ನಾಟಕದ 6 ಸೇರಿ ಉತ್ತರದ 8 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿಯನ್ನ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ಕ್ಕೆ ಬದಲಾಯಿಸಲಾಗಿದೆ.
ಬೆಳೆದ ಬೆಳೆ ಒಣಗಿ ಹೋದ ಕಾರಣ ಸಾಲಬಾಧೆಗೆ ಹೆದರಿ ಬಾಗಲಕೋಟೆಯಲ್ಲಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳು ಕೆರೆಯಲ್ಲಿ ಈಜಾಡಿ ಖುಷಿ ಪಟ್ಟಿವೆ.
ಕಾರವಾರದಲ್ಲಿ ಕಾಳಿಂಗ ಸರ್ಪಕ್ಕೆ ಬಾಟಲಿಯಲ್ಲಿ ನೀರು ಕುಡಿಸಿರುವ ದೃಶ್ಯ ಇಂದು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿದ್ದು ವೈರಲ್ ಆಗಿದೆ.
https://www.youtube.com/watch?v=7v6NjKWzbSU
https://www.youtube.com/watch?v=5vi5ECBTGl4
