Connect with us

Fashion

ಚಳಿಗಾಲದ ಕಾಮನ್ ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿದೆ 5 ಟಿಪ್ಸ್

Published

on

ಳಿಗಾಲ ಬಂತೆದ್ರೆ ಡ್ರೈ ಸ್ಕಿನ್ ಸಮಸ್ಯೆ ಇದ್ದಿದ್ದೇ. ಮುಖ, ಕೈ-ಕಾಲಿನ ತೇವಾಂಶ ಕಡಿಮೆಯಾಗೋದಲ್ಲದೆ ಕಪ್ಪಾಗಿ ಕಾಣುತ್ತದೆ. ಕೂದಲು ಒಣಗಿದಂತಾಗಿ ಹುಲ್ಲಿನಂತೆ ಕಾಣುತ್ತೆ. ಇನ್ನು ಪಾದದ ಬಿರಕುನ ಸಮಸ್ಯೆ ಹೇಳೊದೇ ಬೇಡ. ಈಗಾಗಲೇ ಚಳಿಗಾಲ ಶುರುವಾಗಿರೋದ್ರಿಂದ ಇನ್ನೂ ಮೂರ್ನಾಲ್ಕು ತಿಂಗಳು ಈ ಎಲ್ಲಾ ಸಮಸ್ಯೆಗಳು ಕಾಮನ್. ಇದರಿಂದ ಸ್ವಲ್ಪ ರಿಲೀಫ್ ಪಡೆಯೋಕೆ ಈ ಟಿಪ್ಟ್ ಟ್ರೈ ಮಾಡಿ.

1. ತುಟಿಗೆ ಇರಲಿ ಆರೈಕೆ
ಚಳಿಗಾಲದಲ್ಲಿ ಮೊದಲು ಎದುರಾಗೋ ಸಮಸ್ಯೆಯೇ ತುಟಿ ಒಡೆಯುವುದು, ಅಥವಾ ಕಪ್ಪಾಗುವುದು. ಪ್ರತಿನಿತ್ಯ ಲಿಪ್ ಬಾಮ್ ಹಚ್ಚಿದ್ರೂ ಚಳಿಗಾಲದಲ್ಲಿ ಹೆಚ್ಚಿನ ಕೇರ್ ಮಾಡಿಕೊಳ್ಳಬೇಕಾಗುತ್ತೆ. ಹೀಗಾಗಿ ಯಾವಾಗ್ಲೂ ಲಿಪ್ ಬಾಮ್ ಜೊತೆಯಲ್ಲಿರಲಿ. ರಾತ್ರಿ ಮಲಗುವಾಗ ಮರೆಯದೇ ಲಿಪ್ ಬಾಮ್ ಅಥವಾ ವ್ಯಾಸಲೀನ್ ಹಚ್ಚಿ ಮಲಗಿ. ತುಟಿ ತುಂಬಾ ಒಡೆದಿದ್ದು, ಕಪ್ಪಾಗಿದ್ದರೆ ಗ್ಲಿಸರಿನ್ ಅಥವಾ ಬದಾಮಿ ಎಣ್ಣೆ/ ಆಲೀವ್ ಎಣ್ಣೆ ಹಚ್ಚಿ ಮಲಗಿ. ಮೂರು ದಿನಗಳಿಗೊಮ್ಮೆ ಸ್ಕ್ರಬ್ ಮಾಡಿ. ವ್ಯಾಸಲೀನ್‍ಗೆ ಸ್ವಲ್ಪ ಸಕ್ಕರೆ ಬೆರೆಸಿ ತುಟಿಯ ಮೇಲೆ ನಿಧಾನವಾಗಿ ಉಜ್ಜಿ ಸ್ಕ್ರಬ್ ಮಾಡಬಹುದು.

2. ಸ್ನಾನಕ್ಕೆ ಸೋಪ್ ಬಳಸಬೇಡಿ
ಚಳಿಗಾಲದಲ್ಲಿ ಸೋಪ್ ಬಳಸಿ ಸ್ನಾನ ಮಾಡಿದ್ರೆ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ. ಜೊತೆಗೆ ಸ್ನಾನ ಮಾಡಿ ಹೊರಬಂದ ನಂತರ ಮೈ ಮೇಲೆ ಬಿಳಿ ಪದರದಂತೆ ಕಾಣುತ್ತದೆ ಅಥವಾ ಚರ್ಮದಲ್ಲಿ ಹುರುಕಿ ಬಿಟ್ಟಂತೆ ಕಾಣುತ್ತದೆ. ಆದ್ದರಿಂದ ಸೋಪ್ ಬಳಸೋದನ್ನ ಸಾಧ್ಯವಾದಷ್ಟು ಕಡಿಮೆ ಮಾಡಿ. ಬದಲಿಗೆ ಕಡಲೆಹಿಟ್ಟು ಬಳಸಿ ಸ್ನಾನ ಮಾಡಿ. ಇನ್ನು ಮುಖಕ್ಕಂತೂ ಸೋಪ್ ಹಚ್ಚಲೇಬೇಡಿ. ಕಡಲೆಹಿಟ್ಟು ಬಳಸಿದ್ರೆ ಉತ್ತಮ. ಸ್ನಾನವಾದ ಕೂಡಲೇ ಬಾಡಿ ಲೋಷನ್ ಬಳಸಿ. ಯಾಕಂದ್ರೆ ಬಿಸಿನೀರಿನಿಂದ ರಂಧ್ರಗಳು ತೆರೆದುಕೊಂಡಿದ್ದು, ಆಗ ಲೋಷನ್ ಹಚ್ಚಿದರೆ ಚರ್ಮದ ಮೇಲೆ ಮಾತ್ರ ಇರದೆ, ಒಳಗೆ ಹೋಗಿ ಮಾಯ್‍ಶ್ಚರೈಸ್ ಮಾಡುತ್ತದೆ.

3. ಪಾದದ ಬಿರುಕು ಕಡಿಮೆಯಾಗಿಸಲು ಹೀಗೆ ಮಾಡಿ
ಚಳಿಗಾಲದಲ್ಲಿ ಪಾದದಲ್ಲಿ ಬಿರುಕು ಉಂಟಾಗೋದು ಸಾಮಾನ್ಯ. ಇದಕ್ಕೆ ಮೊದಲೇ ಎಚ್ಚರಿಕೆ ವಹಿಸಿದ್ರೆ ಉತ್ತಮ. ಆದ್ದರಿಂದ ಹೊರಗಡೆ ಹೋಗುವಾಗ ಕಾಲಿಗೆ ಶೂ, ಸಾಕ್ಸ್ ಧರಿಸಿ. ಹಾಗೂ ಬಿರುಕು ಉಂಟಾಗಿದ್ದರೆ ಚಿಂತೆ ಬೇಡ. ರಾತ್ರಿ ಮಲಗುವ ಮುನ್ನ ಕಾಲನ್ನ ಬೆಚ್ಚಗಿನ ನೀರಿನಲ್ಲಿ ತೊಳೆದು, ಬಟ್ಟೆಯಿಂದ ಒರೆಸಿ, ವ್ಯಾಸಲೀನ್ ಅಥವಾ ಬಾಡಿ ಲೋಷನ್/ಫುಟ್ ಕ್ರೀಮ್ ಹೆಚ್ಚಿಕೊಳ್ಳಿ. ಪಾದದಲ್ಲಿ ಜಾಸ್ತಿ ಬಿರುಕಿದ್ದರೆ ಅದಕ್ಕೆಂದೇ ಇರುವ ಕ್ರ್ಯಾಕ್ ಹೀಲ್ ಆಯಿಂಟ್‍ಮೆಂಟ್ ಹಚ್ಚಿ. ವ್ಯಾಸಲೀನ್ ಕೂಡ ಬಳಸಬಹುದು. ಒಂದೆರಡು ನಿಮಿಷಗಳ ನಂತರ ಸಾಕ್ಸ್ ಧರಿಸಿ ನಂತರ ಮಲಗಿ. ಬೆಳಗ್ಗೆ ಎದ್ದ ನಂತರ ನಿಮ್ಮ ಕಾಲು ಸಾಫ್ಟ್ ಆಗಿರೋದನ್ನ ನೀವೇ ಗಮನಿಸಬಹುದು.

3. ಕೋಮಲ ಕೈಗಳಿಗೆ ಇಲ್ಲಿದೆ ಸೀಕ್ರೆಟ್
ಒಂದು ವೇಳೆ ನಿಮ್ಮ ಕೈಗಳು ತುಂಬಾ ಒಣಗಿದಂತಾಗಿದ್ದು, ಸುಕ್ಕುಗಟ್ಟಿದಂತೆ ಕಾಣುತ್ತಿದ್ದರೆ ಹೀಗೆ ಮಾಡಿ. ರಾತ್ರಿ ಮಲಗುವ ಮುನ್ನ ಕೈಗಳಿಗೆ ವ್ಯಾಸಲೀನ್ ಹಚ್ಚಿ ಒಂದು ನಿಮಿಷದ ನಂತರ ಗ್ಲವ್ಸ್ ಧರಿಸಿ ಮಲಗಿ. ಇದರ ಜೊತೆಗೆ ದಿನದ ಮಧ್ಯೆ ಕೈಗಳು ಡ್ರೈ ಆದಂತೆ ಅನ್ನಿಸಿದ್ರೆ ಹ್ಯಾಂಡ್ ಕ್ರೀಂ ಅಥವಾ ಬಾಡಿ ಲೋಷನ್ ಹಚ್ಚಿಕೊಳ್ಳಿ.

4. ಕೂದಲು ಕಳೆಗುಂದದಿರಲಿ
ಚಳಿಗಾಲದಲ್ಲಿ ಕೂದಲ ಸಮಸ್ಯೆಯೂ ಒಂದು. ಕೈ ಕಾಲುಗಳಂತೆ ಕೂದಲು ಸಹ ಡ್ರೈ ಆಗುತ್ತದೆ. ಹೀಗಾಗಿ ವಾರಕ್ಕೊಂದು ಬಾರಿ ಬಿಸಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ ಸ್ನಾನ ಮಾಡಿ. ಮೈ ತುಂಬಾ ಎಣ್ಣೆ ಹಚ್ಚಿ ಮಸಾಜ್ ಮಾಡಿ ಅಭ್ಯಂಗ ಮಾಡಬಹುದು. ಇದರಿಂದ ಸ್ಟ್ರೆಸ್ ಕೂಡ ಕಡಿಮೆಯಾಗುತ್ತದೆ. ಕೊಬ್ಬರಿ ಎಣ್ಣೆ/ ಆಲಿವ್ ಎಣ್ಣೆ ಅಥವಾ ಹೆರಳೆಣ್ಣೆ ನಿಮಗೆ ಯಾವುದು ಇಷ್ಟವೋ ಆ ಎಣ್ಣೆ ಬಳಸಬಹುದು. ಆದ್ರೆ ಎಣ್ಣೆಯನ್ನ ಬಿಸಿ ಮಾಡೋದು ಮರೆಯಬೇಡಿ. ಹಾಗಂತ ಹೊಗೆಯಾಡುವಂತೆ ಕಾಯಿಸಬೇಡಿ. ಸ್ವಲ್ಪ ಬೆಚ್ಚಗೆ ಮಾಡಿ ಹಚ್ಚಿದ್ರೆ ಆಯ್ತು.

5. ಬೆಚ್ಚಗಿರಿ
ಚಳಿಗಾಲಕ್ಕೆ ತಕ್ಕಂತೆ ನಿಮ್ಮ ಉಡುಗೆ ಇರಲಿ. ಕೊರೆಯೋ ಚಳಿಯಲ್ಲಿ ಸ್ಲೀವ್ ಲೆಸ್ ಟಾಪ್ ಹಾಕೊಂಡು ಹೋದ್ರೆ ಫ್ರೀಜ್ ಆಗ್ತೀರಾ ಅಷ್ಟೇ. ಜ್ಯಾಕೆಟ್/ ಸ್ವೆಟರ್, ಸ್ಕಾರ್ಫ್ ಯಾವಾಗ್ಲೂ ಜೊತೆಯಲ್ಲಿರಲಿ. ಬಟ್ಟೆ ತುಂಬಾ ತೆಳುವಿದ್ದರೆ ಅದಕ್ಕೆ ಹೊಂದಿಕೆಯಾಗುವಂತ ಟ್ಯಾಂಕ್ ಟಾಪ್ ಅಥವಾ ಸ್ಪೆಗೆಟ್ಟಿ ಧರಿಸಿ ಅದರ ಮೇಲೆ ಟಾಪ್ ಧರಿಸಿ. ಚಳಿಗೆ ತಲೆನೋವು ಬರುವ ಸಮಸ್ಯೆ ನಿಮಗಿದ್ದರೆ ಸಣ್ಣದಾದ ಹತ್ತಿ ಉಂಡೆಯನ್ನ ಕಿವಿಗೆ ಇಟ್ಟುಕೊಳ್ಳಿ. ಬಿಸಿ ನೀರು, ಸೂಪ್ ಕುಡಿಯಿರಿ. ಆರೋಗ್ಯದ ಬಗ್ಗೆ ಗಮನ ಇರಲಿ.

ನಿಮ್ಮ ಬ್ಯಾಗ್‍ನಲ್ಲಿ ಈ ವಸ್ತುಗಳು ಸದಾ ಇರಲಿ: ಲಿಪ್ ಬಾಮ್, ಹ್ಯಾಂಡ್ ಕ್ರೀಂ/ ಚಿಕ್ಕದಾದ ಬಾಡಿ ಲೋಷನ್ ಬಾಟಲ್, ಸ್ಕಾರ್ಫ್, ಸ್ವೆಟರ್/ಜಾಕೆಟ್, ಅಗತ್ಯವಿದ್ದರೆ ಗ್ಲವ್ಸ್

Click to comment

Leave a Reply

Your email address will not be published. Required fields are marked *