ಚಿಕ್ಕೋಡಿ: ಆರ್‌ಎಂಡಿ ಹೆಸರಿನ ನಕಲಿ ಪಾನ್ ಮಸಲಾ ತಯಾರಿಸಿ ಬೆಳಗಾವಿ ಜಿಲ್ಲೆ ಸೇರಿದಂತೆ ದೇಶಾದ್ಯಂತ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಳಗಾವಿ ಜಿಲ್ಲೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ.
Advertisement
ಇದೇ ಮೇ ತಿಂಗಳಲ್ಲಿ ಖಾಸಗಿ ಕಂಪನಿಯ ದೂರನ್ನು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರತ್ಯೇಕ ತಂಡವನ್ನು ರಚಿಸಿ ತನಿಖೆ ಆರಂಭಿಸಿದರು. ಈ ವೇಳೆ ಆರೋಪಿಗಳು ಕೇವಲ ಆರ್‌ಎಂಡಿ ಮಾತ್ರ ಅಲ್ಲದೇ ವಿವಿಧ ಪಾನ್ ಮಸಲಾ ಸೇರಿದಂತೆ ದೇಶಾದ್ಯಂತ ಚಲಾವಣೆಯಲ್ಲಿರುವ ನಾನಾ ಕಂಪನಿಯ ಉತ್ಪನ್ನಗಳನ್ನು ಖೊಟ್ಟಿಯಾಗಿ ತಯಾರಿಸುತ್ತಿರುವುದು ತಿಳಿದು ಬಂದಿದೆ.
Advertisement
Advertisement
ಸದಲಗಾ ಪಟ್ಟಣದಲ್ಲಿ ರೇಡ್ ಮಾಡಿ ಆರೋಪಿಗಳ ವಿಚಾರಣೆ ನಡೆಸಿದಾಗ, ಸರ್ಕಾರಕ್ಕೆ ಆರೋಪಿಗಳಿಂದ ಕೋಟ್ಯಂಂತರ ರೂಪಾಯಿ ತೆರಿಗೆ ಹಣ ವಂಚನೆ ಆಗಿರುವ ವಿಚಾರ ಬಹಿರಂಗಗೊಂಡಿದೆ. ಸಾರ್ವಜನಿಕರ ಆರೋಗ್ಯಕ್ಕೂ ನಕಲಿ ಪಾನ್ ಮಸಾಲಾದಿಂದ ಹಾನಿಯಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರೆಸಿದ ಅಧಿಕಾರಿಗಳು, ಹೈದರಾಬಾದ್ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ ಬೆಂಗಳೂರು ಹಾಗೂ ದೆಹಲಿಯಲ್ಲಿ ಕೂಡ ಇವರ ನಕಲಿ ಉತ್ಪಾದನೆಯ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಎಲ್ಲ ಸಾಮಾಗ್ರಿ, ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕೆರೂರ ಘರ್ಷಣೆ – ಸಿದ್ದರಾಮಯ್ಯ ಭೇಟಿಯನ್ನು ನಿರಾಕರಿಸಿದ ಹಿಂದೂ ಸಂಘಟನೆಯ ಗಾಯಾಳುಗಳು
Advertisement
ಇದೀಗ ಕರ್ನಾಟಕದ ಇಬ್ಬರು, ತೆಲಂಗಾಣದ ಓರ್ವ ಹಾಗೂ ದೆಹಲಿಯ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಮತ್ತು ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣಗಳು ಹಾಗೂ ಲಕ್ಷಾಂತರ ರೂ. ಮೌಲ್ಯದ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆದು ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ಕಾರ್ಯವೈಖರಿಗೆ ಪಾನ್ ಮಸಾಲಾ ಕಂಪನಿಯ ಸಿಬ್ಬಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಮಿಳು ನಟ ಪ್ರತಾಪ್ ಪೋಥೆನ್ ಚೆನ್ನೈ ಫ್ಲಾಟ್ ನಲ್ಲಿ ಶವವಾಗಿ ಪತ್ತೆ
ಈ ಬಗ್ಗೆ ಪ್ರತಿಕ್ರಿಯಿಸಿದ ಬೆಳಗಾವಿ ಎಸ್‍ಪಿ ಸಂಜೀವ್ ಪಾಟೀಲ್ ಅವರು, ನಕಲಿ ಪಾನ್ ಮಸಲಾದ ಪ್ರಕರಣ ಕರ್ನಾಟಕ ಅಷ್ಟೇ ಅಲ್ಲದೇ ಹೈದರಾಬಾದ್ ಹಾಗೂ ದೆಹಲಿಯಲ್ಲೂ ನಡೆಯುತ್ತಿದೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ವಿಚಾರಣೆಯಲ್ಲಿ ಬೆಂಗಳೂರು ಹಾಗೂ ದೆಹಲಿಯಲ್ಲಿ ನಕಲಿ ಪಾನ್ ಮಸಾಲಾ ಉತ್ಪಾದನೆ ಘಟಕಗಳ ಮೇಲೆ ನಮ್ಮ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೊಂದೇ ಅಲ್ಲ ಇನ್ನು ಹಲವಾರು ಕಂಪನಿಗಳ ನಕಲಿ ಬ್ರಾಂಡ್ ಹೆಸರಿನಲ್ಲಿ ಈ ದಂಧೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.