5 ಲಕ್ಷ ರೆಮಿಡಿಸಿವರ್ ಆಮದು, ಔಷಧ ಕೊರತೆ ಆಗದಂತೆ ಕಟ್ಟೆಚ್ಚರ: ಡಿಸಿಎಂ ಅಶ್ವತ್ಥನಾರಾಯಣ

Public TV
1 Min Read
FotoJet 3 39

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ 5 ಲಕ್ಷ ರೆಮಿಡಿಸಿವಿರ್ ಇಂಜೆಕ್ಷನ್ ಆಮದು ಮಾಡಿಕೊಳ್ಳುತ್ತಿದ್ದು, ಈ ಸಲುವಾಗಿ ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಎರಡನೇ ಅಲೆಯನ್ನು ಎದುರಿಸಲು ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಡೀ ರಾಜ್ಯದಲ್ಲಿ ಎಲ್ಲಿಯೂ ರೆಮಿಡಿಸಿವರ್ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಜೊತೆಗೆ, ಅಗತ್ಯವಾದ ಎಲ್ಲ ಔಷಧಿಗಳು, ಸಾಮಗ್ರಿಗಳು ಮತ್ತು ವೈದ್ಯಕೀಯ ಬಳಕೆಯ ವಸ್ತುಗಳ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ” ಎಂದರು.

cm bsy 2

15,000 ಆಮ್ಲಜನಕ ಸಾಂದ್ರಕಗಳ (ಆಕ್ಸಿಜನ್ ಕನ್ಸೆಂಟ್ರೇಟರ್) ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಈಗಾಗಲೇ 3,000 ಆಮ್ಲಜನಕ ಸಾಂದ್ರಕಗಳ ಖರೀದಿಗೆ ಆದೇಶ ನೀಡಲಾಗಿದ್ದು, ಉಳಿದ 12,000 ಸಾಂದ್ರಕಗಳ ಖರೀದಿಗೆ ಜಾಗತಿಕ ಟೆಂಡರ್ ಕರೆಯಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ರಾಜ್ಯದಲ್ಲಿ ಈಗ ಕೋವಿಡ್ ಬೆಡ್‍ಗಳನ್ನು 4,000ದಿಂದ 24,000ಕ್ಕೆ ಹೆಚ್ಚಿಸಲಾಗಿದೆ. ಒಟ್ಟು 60,000 ಆಕ್ಸಿಜನ್ ಬೆಡ್‍ಗಳಿವೆ. ಆಕ್ಸಿಜನ್ ಅಗತ್ಯ ಇಲ್ಲದವರು ಕೂಡ ಆಸ್ಪತ್ರೆ ಸೇರಿದ್ದರಿಂದ ಬೆಡ್‍ಗಳ ಕೊರತೆ ಉಂಟಾಗಿತ್ತು. ಇದನ್ನು ತಡೆಯಲು ದಾಖಲಾತಿಗೆ ಮುನ್ನ ಭೌತಿಕ ಪರೀಕ್ಷೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.

FotoJet 8 23

ಎಲ್ಲಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿ ಜಿಲ್ಲೆಯ ವೈದ್ಯಕೀಯ ಅಗತ್ಯ ವಸ್ತುಗಳ ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಮಾರ್ಚ್ ತಿಂಗಳಲ್ಲಿ ದಿನಕ್ಕೆ 100 ರಿಂದ 150 ಮೆಟ್ರಿಕ್ ಟನ್ ಆಗಿದ್ದ ಆಮ್ಲಜನಕದ ಬೇಡಿಕೆ ಇದ್ದಕ್ಕಿದ್ದಂತೆ ದಿನಕ್ಕೆ 1,200 ಟನ್‍ಗಳಿಗೆ ಏರಿದೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಕೋವಿಡ್ ಕರ್ತವ್ಯಕ್ಕೆ ಹಾಜರಾಗುವ ವೈದ್ಯ ವಿದ್ಯಾರ್ಥಿಗಳು ಮತ್ತು ಇಂಟರ್ನಿಗಳಿಗೆ ಎಲ್ಲ ಸೌಲಭ್ಯ ಕಲ್ಪಸಲಾಗುತ್ತಿದೆ. ಅವರಿಗೆ ಸಂಬಳ ಮತ್ತು ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಜತೆಗೆ ಅವರ ಆರೋಗ್ಯ ಮತ್ತು ವಿಶ್ರಾಂತಿಯ ಮೇಲೂ ನಿಗಾ ಇಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *